

ಶ್ರೀರಂಗಪಟ್ಟಣ: ರಾಜ್ಯಕ್ಕೆ ಎದುರಾಗಿರುವ ಬರ ಸಮಸ್ಯೆ ನಿವಾರಣೆಯಾಗಲಿ, ರಾಜ್ಯ ಸಮೃದ್ಧವಾಗಲಿ ಹಾಗೂ ರಾಜ್ಯದ ಜನರಿಗೆ ಒಳಿತಾಗಲಿ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರ್ನಾಟಕದ ಜೀವನದಿ ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಿದರು.
ಕೆಆರ್ ಎಸ್ ಅಣೆಕಟ್ಟಿನ ಬೃಂದಾವನ ಉದ್ಯಾನದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಶಿವಕುಮಾರ್ ಅವರು ಕಾವೇರಿ ಆರತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿದರು. ನಂತರ ರಾಜ್ಯದ ವಿವಿಧ ಭಾಗಗಳ ಕಲಾ ತಂಡಗಳ ಪ್ರದರ್ಶನವನ್ನು ವೀಕ್ಷಣೆ ಮಾಡಿದರು.
ಧಾರ್ಮಿಕ ದತ್ತಿ ಇಲಾಖೆಯ ಸ್ಥಳೀಯ 13 ವೈದಿಕರ ತಂಡವು ದಕ್ಷಿಣ ಭಾರತದ ಶೈಲಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿತು. ಮೊದಲು ವಾತಾಪಿ ಗಣಪತಿಂ ಭಜೆ ಮಂಗಳವಾದ್ಯದಿಂದ ಪೂಜೆ ಪ್ರಾರಂಭವಾಗಿ, ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ, ಸಂಕಲ್ಪ ನೆರವೇರಿಸಲಾಯಿತು.
ಮುಂದಿನ ಬಜೆಟ್ ನಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಸೂಕ್ತ ಅನುದಾನ ಮೀಸಲಿಡಲಾಗುವುದು. ಅರಣ್ಯ ಇಲಾಖೆಗೆ ಸೇರಿದ 5000 ಹೆಕ್ಟೇರ್ ಭೂಮಿಗೆ ಪರ್ಯಾಯ ಭೂಮಿಯನ್ನು ಒದಗಿಸಲು ಈಗಾಗಲೇ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಭೂಮಿ ಪೂಜೆಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಕಾವೇರಿ ನಮ್ಮ ಸಂಸ್ಕೃತಿ, ಪ್ರಕೃತಿ ಹಾಗೂ ನಮ್ಮ ಬದುಕಿನ ದೊಡ್ಡ ಶಕ್ತಿ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ನೀರು ಉಳಿದರೆ ನಾಡು ಉಳಿಯುತ್ತದೆ. ಕಾವೇರಿ ಉಳಿದರೆ ಕರುನಾಡು ಉಳಿಯುತ್ತದೆ ಎಂದು ನಾವೆಲ್ಲ ಒಪ್ಪಿಕೊಂಡಿದ್ದೇವೆ" ಎಂದು ಹೇಳಿದರು. "ಚಾಮುಂಡೇಶ್ವರಿ ಶಕ್ತಿಯ ಸಂಕೇತವಾದರೆ ಕಾವೇರಿ ಸಮೃದ್ಧಿಯ ಸಂಕೇತ. ನಮ್ಮ ನಾಡಿನ ಸಂಸ್ಕೃತಿಗೆ ನಮನ ಸಲ್ಲಿಸಲು ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮುಂದಿನ ದಿನಗಳಲ್ಲಿಯೂ ಎಲ್ಲಾ ಸರ್ಕಾರಗಳು, ಸಾರ್ವಜನಿಕರು, ಇಲಾಖೆಗಳು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು" ಎಂದರು.
ಜಲ ಎಲ್ಲರ ಜೀವ. ಜೀವ ಜಲಕ್ಕೆ ನಮನ ಸಲ್ಲಿಸುವ ಕೆಲಸವನ್ನು ಮಾಡಬೇಕು, ಉಪಕಾರ ಸ್ಮರಣೆ ಸಲ್ಲಿಸಬೇಕು. ಕಾವೇರಿ ಹುಟ್ಟಿ, ಸಮುದ್ರ ಸೇರುವವರೆಗೂ ಅದೆಷ್ಟೋ ನಗರ, ಜನರು ಉದ್ಯಮಗಳಿಗೆ ರಕ್ಷಣೆಯಾಗಿದೆ" ಎಂದು ತಿಳಿಸಿದರು.
ಕನ್ನಂಬಾಡಿ ಕಟ್ಟೆ 347 ಕಿ.ಮೀ ಉದ್ದ, 37147 ಎಕರೆ ಭೂಮಿಗೆ ನೀರಾವರಿಯು ಒದಗಿಸುತ್ತಿದೆ. ಹಿಂದೆ ನಾನು ಜಲ ಸಂಪನ್ಮೂಲ ಸಚಿವನಾದ್ದ ಸಂದರ್ಭದಲ್ಲಿ ಮಂಡ್ಯ ಹಾಗೂ ಮೈಸೂರು ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿ ಅಳತೆ ಮಾಡುವ ಕೆಲಸವನ್ನು ವಹಿಸಲಾಗಿತ್ತು.
ಈಗಾಗಲೇ ಇದರ ಗುರುತನ್ನು ಕೂಡ ಮಾಡಲಾಗಿದೆ. ಕಳೆದ ವರ್ಷ 341 ಟಿಎಂಸಿ ನೀರು ಸಮುದ್ರದ ಪಾಲಾಯಿತು. 177 ಟಿಎಂಸಿ ತಮಿಳುನಾಡಿಗೆ ಹರಿಸಬೇಕಿತ್ತು . ಈ ವರ್ಷ ದೇಶದಲ್ಲಿ ಭೀಕರ ಬರಗಾಲ ಎದುರಾಗಿದೆ ರಾಜ್ಯದಲ್ಲಿ ಕೃಷ್ಣ ಅಣೆಕಟ್ಟು ಬಿಟ್ಟರೆ ಬೇರೆ ಯಾವ ಅಣೆಕಟ್ಟು ತುಂಬಿಲ್ಲ" ಎಂದರು.
ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಆಂಧ್ರಪ್ರದೇಶ ತೆಲಂಗಾಣ ಹಾಗೂ ನಾನು ಸೇರಿ ಭೇಟಿ ಮಾಡಿದ ಸಂದರ್ಭದಲ್ಲಿ ಕಾವೇರಿ ಮತ್ತು ತುಂಗಭದ್ರ ಜಲಾಶಯಗಳಿಂದ ಹೂಳು ತೆಗೆಯಲು ಟೆಂಡರ್ ಕರೆಯಲು ಸೂಚಿಸಿದ್ದಾರೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಈಗಾಗಲೇ ಹೂಳು ತೆಗೆಯುವ ಕಾರ್ಯಕ್ರಮ ಪ್ರಾರಂಭವಾಗಿದ್ದು, ಡ್ರಜ್ಜಿಂಗ್ ಮೆಶೀನ್ ತರಿಸಿ ಹೂಳು ತೆಗೆಸಿ, ಮರಳು ಹಾಗೂ ಮಣ್ಣನ್ನು ರೈತರಿಗೆ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ನಾನು ಹಾಗೂ ನೀರಾವರಿ ಸಚಿವರು ತೆಲಂಗಾಣಕ್ಕೆ ಭೇಟಿ ನೀಡಿ ಈ ಯೋಜನೆಯನ್ನು ವೀಕ್ಷಿಸಿ ನೀರು ವ್ಯರ್ಥವಾಗದಂತೆ ಪ್ರಯತ್ನ ಮಾಡಲಾಗುವುದು" ಎಂದರು.
ನಾನು ಟೀಕೆಗಳನ್ನು ಸ್ವಾಗತಿಸುವವನು. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂದು ನಂಬಿರುವವನು . ರಾಜಕಾರಣ ಮಾಡುವವರಿಗೆ ವೈರಿಗಳು ಇರಬೇಕು, ಟೀಕೆ ಮಾಡುವವರೂ ಇರಬೇಕು. ವೈರಿಗಳು ಇಲ್ಲದಿದ್ದರೆ ಎಚ್ಚರಿಕೆಯಿಂದ ಬದುಕು ಮತ್ತು ಆಳ್ವಿಕೆಯನ್ನು ನಡೆಸಲು ಸಾಧ್ಯವಿಲ್ಲ.
ಟೀಕೆ, ಅವಹೇಳನಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಬದುಕಿನಲ್ಲಿ ನನಗೆ ಕಷ್ಟವೂ, ಗೊತ್ತು ಸುಖವು ಗೊತ್ತು. ರಾಜ್ಯದ ಜನತೆಗೆ ಸೇವೆ ಮಾಡಲು ರಾಜ್ಯದ ಜನತೆ ನನ್ನ ಹಾಗೂ ಸಿದ್ದರಾಮಯ್ಯನವರ ನಾಯಕತ್ವದಲ್ಲಿ 136 ಸ್ಥಾನಗಳನ್ನು ಕೊಟ್ಟು ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿದ್ದಾರೆ" ಎಂದರು.