Cancer ರೋಗಿಗಳಿಗೆ ಬಿಗ್ ರಿಲೀಫ್‌: ನ.9ರಿಂದ ಔಷಧಿಗಳ ದರ ಶೇ.70ರವರೆಗೆ ಇಳಿಕೆ..!

ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ದೊಡ್ಡ ಸವಾಲಾಗಿದೆ. ಔಷಧಗಳ ಬೆಲೆ ಹೆಚ್ಚಿರುವ ಕಾರಣಕ್ಕೆ ಯಾವುದೇ ರೋಗಿಯೂ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಬರಬಾರದು.
A massive drop in this price
ಈ ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ Online Desk
Updated on: 

ಬೆಂಗಳೂರು: ಕೇಂದ್ರ ಸರ್ಕಾರವು 137 ಕ್ಯಾನ್ಸರ್‌ ನಿರೋಧಕ ಔಷಧಗಳ ವ್ಯಾಪಾರ ಮಾರ್ಜಿನ್‌ ಅನ್ನು ಶೇ.30ಕ್ಕೆ ಮಿತಿಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ನವೆಂಬರ್ 9ರಿಂದ ಕ್ಯಾನ್ಸರ್ ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆಯಾಗುವ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರದ ಈ ಕ್ರಮವನ್ನು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಸ್ವಾಗತಿಸಿದ್ದು, ರೋಗಿಗಳಿಗೆ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ.'

ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (ಎನ್‌ಪಿಪಿಎ) ಕೈಗೊಂಡಿರುವ ಈ ನಿರ್ಧಾರದಿಂದ ಕರ್ನಾಟಕ ಸೇರಿದಂತೆ ದೇಶಾದ್ಯಂತದ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲಿದೆ. ದುಬಾರಿ ಔಷಧಗಳ ವೆಚ್ಚದಿಂದಾಗಿ ರೋಗಿಗಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಹೊರೆಯನ್ನು ಇದು ಕಡಿಮೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ದೊಡ್ಡ ಸವಾಲಾಗಿದೆ. ಔಷಧಗಳ ಬೆಲೆ ಹೆಚ್ಚಿರುವ ಕಾರಣಕ್ಕೆ ಯಾವುದೇ ರೋಗಿಯೂ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಬರಬಾರದು ಎಂದು ಹೇಳಿದ್ದಾರೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದಲ್ಲಿರುವ ಎನ್‌ಪಿಪಿಎ, ಗುರುತಿಸಲಾದ 137 ಔಷಧಗಳ ವ್ಯಾಪಾರ ಮಾರ್ಜಿನ್‌ ಅನ್ನು ತರ್ಕಬದ್ಧಗೊಳಿಸುವ ಕ್ರಮ ಕೈಗೊಂಡಿದೆ. ಈ ಔಷಧಗಳು ನಿಗದಿತ ಬೆಲೆ ನಿಯಂತ್ರಣ ಪಟ್ಟಿಗೆ ಸೇರದ ಕ್ಯಾನ್ಸರ್‌ ನಿರೋಧಕ ಔಷಧಗಳಾಗಿವೆ. ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಗಳು 2026ರ ನವೆಂಬರ್ 9ರಿಂದ ಜಾರಿಗೆ ಬರಲಿವೆ. ಪ್ರತಿಯೊಂದು ಔಷಧದ ಪ್ರಸ್ತುತ ಬೆಲೆ ರಚನೆಗೆ ಅನುಗುಣವಾಗಿ ಬೆಲೆ ಇಳಿಕೆಯ ಪ್ರಮಾಣ ಬದಲಾಗಲಿದೆ.

A massive drop in this price
ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!

ಈ ಪಟ್ಟಿಯಲ್ಲಿ 20ಕ್ಕೂ ಹೆಚ್ಚು ಬಗೆಯ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಬಳಸುವ ರೋಗನಿರೋಧಕ ಚಿಕಿತ್ಸೆಯ ಔಷಧಗಳು, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳಿಗೆ ನೀಡುವ ಡೆನೊಸುಮ್ಯಾಬ್, ಕ್ಯಾನ್ಸರ್ ರೋಗಿಗಳಲ್ಲಿ ನ್ಯೂಟ್ರೋಪೀನಿಯಾ ಸಮಸ್ಯೆ ತಡೆಯಲು ಬಳಸುವ ಪೆಗ್‌ಫಿಲ್ಗ್ರಾಸ್ಟಿಮ್ ಹಾಗೂ ಕರುಳಿನ, ಅಂಡಾಶಯ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಬಳಸುವ ಬೆವಾಸಿಜುಮ್ಯಾಬ್ ಸೇರಿವೆ. ವ್ಯಾಪಕವಾಗಿ ಬಳಕೆಯಾಗುವ ಪೆಂಬ್ರೊಲಿಜುಮ್ಯಾಬ್, ಡರ್ವಾಲುಮ್ಯಾಬ್ ಮತ್ತು ಒಸಿಮರ್ಟಿನಿಬ್ ಔಷಧಗಳೂ ಈ ಪಟ್ಟಿಯಲ್ಲಿವೆ.

ಔಷಧಗಳ ಬೆಲೆ ನಿಗದಿಯಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಲು ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ನಡುವೆ ಸಮನ್ವಯ ಅಗತ್ಯವಿದೆ ಎಂದು ಖಾದರ್ ಹೇಳಿದ್ದಾರೆ.

ಚಿಕಿತ್ಸೆಯ ವೆಚ್ಚ ಭರಿಸಲು ಆಸ್ತಿಯನ್ನು ಮಾರಾಟ ಮಾಡುವ ಅಥವಾ ದೊಡ್ಡ ಮೊತ್ತದ ಸಾಲ ಮಾಡುವ ಅನಿವಾರ್ಯತೆಗೆ ಸಿಲುಕಿರುವ ಕುಟುಂಬಗಳ ಆರ್ಥಿಕ ಸಂಕಷ್ಟದ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ.

ಔಷಧಗಳ ವ್ಯಾಪಾರ ಮಾರ್ಜಿನ್‌ ಅನ್ನು ಔಷಧಗಳ (ಬೆಲೆ ನಿಯಂತ್ರಣ) ಆದೇಶ–2013ರ ಅಡಿಯಲ್ಲಿ ಶೇ.30ಕ್ಕೆ ಮಿತಿಗೊಳಿಸಲಾಗಿದೆ. ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಡಿಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಅಕ್ಟೋಬರ್ 17ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಏಳು ದಿನಗಳೊಳಗೆ ಪರಿಷ್ಕೃತ ಬೆಲೆಗಳ ಕುರಿತು ಔಷಧ ತಯಾರಕರು ಎನ್‌ಪಿಪಿಎಗೆ ಮಾಹಿತಿ ನೀಡಬೇಕು. ನವೆಂಬರ್ 9ರಿಂದ ಆಸ್ಪತ್ರೆಗಳು ಮತ್ತು ಔಷಧ ಮಾರಾಟಗಾರರು ಪರಿಷ್ಕೃತ ಬೆಲೆಯಲ್ಲೇ ಔಷಧಗಳನ್ನು ಮಾರಾಟ ಮಾಡಬೇಕು ಹಾಗೂ ನವೀಕರಿಸಿದ ಬೆಲೆಪಟ್ಟಿಯನ್ನು ಪ್ರದರ್ಶಿಸಬೇಕು. ಗ್ರಾಹಕರು ‘ಫಾರ್ಮಾ ಸಹಿ ದಾಮ್‌’ ಆ್ಯಪ್ ಮತ್ತು ಎನ್‌ಪಿಪಿಎ ವೆಬ್‌ಸೈಟ್ ಮೂಲಕ ಔಷಧಗಳ ಬೆಲೆಗಳನ್ನು ಪರಿಶೀಲಿಸಬಹುದು. ಔಷಧಗಳ ಕೊರತೆ ಉಂಟಾಗದಂತೆ ತಯಾರಕರು ಪೂರೈಕೆಯ ಪ್ರಮಾಣವನ್ನೂ ಕಾಯ್ದುಕೊಳ್ಳಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com