ಬಾಡಿಗೆ ಹಣ ನೀಡದ ವಿಚಾರದಲ್ಲಿ ಜಗಳ: ಬೆಂಗಳೂರಿನಲ್ಲಿ ವಕೀಲನನ್ನು ಗುಂಡಿಕ್ಕಿ ಕೊಂದ ಬಾಡಿಗೆದಾರರು

ಮೃತರನ್ನು ಮಂಜುನಾಥ್‌ (42ವ) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಬೆಂಗಳೂರಿನಲ್ಲಿ ಮನೆಯನ್ನು ಬಾಡಿಗೆ ಕೊಟ್ಟಿದ್ದರು.
Advocate Manjunath
ಅಡ್ವೊಕೇಟ್ ಮಂಜುನಾಥ್
Updated on: 

ಬೆಂಗಳೂರು: ಬಾಕಿ ಬಾಡಿಗೆ ಪಾವತಿಸುವ ವಿಚಾರವಾಗಿ ಉಂಟಾದ ವಿವಾದ ಹಿನ್ನೆಲೆಯಲ್ಲಿ ಇಬ್ಬರು ಬಾಡಿಗೆದಾರರು 42 ವರ್ಷದ ವಕೀಲರೊಬ್ಬರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಕಳೆದ ತಡರಾತ್ರಿ ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ನಡೆದಿದೆ.

ಮೃತರನ್ನು ಮಂಜುನಾಥ್‌ (42ವ) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಬೆಂಗಳೂರಿನಲ್ಲಿ ಮನೆಯನ್ನು ಬಾಡಿಗೆ ಕೊಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನಿನ್ನೆ ರಾತ್ರಿ 11.30ರಿಂದ ಮಧ್ಯರಾತ್ರಿಯ ನಡುವೆ ಈ ಘಟನೆ ನಡೆದಿದೆ. ಸ್ವಿಗ್ಗಿಯಲ್ಲಿ ಡೆಲಿವರಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರೆನ್ನಲಾದ ಇಬ್ಬರು ಆರೋಪಿಗಳು ಮಂಜುನಾಥ್‌ ಅವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು.

ಬಾಡಿಗೆ ಬಾಕಿ ಪಾವತಿಸದ ವಿಚಾರವೇ ಘಟನೆಗೆ ಕಾರಣವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಗುಂಡಿನ ದಾಳಿ ನಡೆಯುವುದಕ್ಕೆ ಸುಮಾರು ಒಂದು ಗಂಟೆ ಮೊದಲು ಮಂಜುನಾಥ್‌ ಮತ್ತು ಇಬ್ಬರು ಬಾಡಿಗೆದಾರರ ನಡುವೆ ತೀವ್ರ ವಾಗ್ವಾದ ನಡೆದಿತ್ತು.

Advocate Manjunath
ಬೆಂಗಳೂರು: ಫೈವ್ ಸ್ಟಾರ್ ಹೋಟೆಲ್‌, ರೆಸ್ಟೋರೆಂಟ್‌ಗಳ ಬಳಿಕ ಇಂದಿರಾ ಕ್ಯಾಂಟೀನ್ ಮೇಲೆ ದಿಢೀರ್ ದಾಳಿ; ಪರಿಶೀಲನೆ

ಮಧ್ಯರಾತ್ರಿಗೂ ಸ್ವಲ್ಪ ಮೊದಲು ಇಬ್ಬರು ಆರೋಪಿಗಳು ಮತ್ತೆ ವಕೀಲರ ಜೊತೆ ಜಗಳ ಮಾಡಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಈ ವೇಳೆ ಆರೋಪಿಗಳಲ್ಲೊಬ್ಬ ಬಂದೂಕು ತೆಗೆದು ಮಂಜುನಾಥ್‌ ಅವರ ತಲೆಗೆ ಗುಂಡು ಹಾರಿಸಿದ್ದಾನೆ.

ಗುಂಡಿನ ದಾಳಿಯ ಬಳಿಕ ಇಬ್ಬರೂ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಕುರಿತು ಮಾಹಿತಿ ದೊರೆತ ತಕ್ಷಣ ವೈಟ್‌ಫೀಲ್ಡ್‌ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗುಂಡಿನ ದಾಳಿ ಮುನ್ನ ನಡೆದ ಘಟನೆಗಳ ಆಧಾರದಲ್ಲಿ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com