

ಶಿವಮೊಗ್ಗ: ತಮಗೆ ಮೊಬೈಲ್ ಮೂಲಕ ಇಬ್ಬರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ, ಹೀಗಾಗಿ ಆರೋಪಿಗಳನ್ನು ಬಂಧಿಸಿ, ತಮಗೆ ಸೂಕ್ತ ಭದ್ರತೆ ನೀಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದ್ದಾರೆ.
ಅಕ್ಟೋಬರ್ 17 ರಂದು ತಮಗೆ ಅನ್ಯಕೋಮಿನ ಇಬ್ಬರು ವ್ಯಕ್ತಿಗಳಾದ ರಿಜ್ವಾನ್ ಬೇಗ್ ಎಂಬ ವ್ಯಕ್ತಿ 7019994981 ಮೊಬೈಲ್ ಸಂಖ್ಯೆಯಿಂದ ರಾತ್ರಿ 8:49 ರ ಸುಮಾರಿಗೆ ಕರೆ ಮಾಡಿದ್ದ. ಡಿಜಿಟಲ್ ಫರಾನ್ ರಶೀದ್ ಎಂಬಾತ ಅದೇ ರಾತ್ರಿ 10:49 ಕ್ಕೆ 9723658527 ನಂಬರಿನಿಂದ ಕರೆ ಮಾಡಿ ವೈಯಕ್ತಿಕವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಕಂಟಕವಿದೆ. ಧಮ್ಕಿ ಹಾಕಿದ ದುಷ್ಟ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನನಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ರಾಷ್ಟ್ರಭಕ್ತ ಬಳಗದವರ ಜೊತೆ ಸೇರಿ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ. ಈಶ್ವರಪ್ಪ ಅವರಿಂದ ದೂರು ಪಡೆದಿರುವ ಎಸ್ಪಿ ನಿಖಿಲ್ ಅವರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಸಿನಿಮಾ ನೋಡುತ್ತಿದ್ದಾಗ ಕರೆ ಬಂದವು: ಎಸ್ಪಿಗೆ ದೂರು ನೀಡಿದ ಬಳಿಕ ಮಾತನಾಡಿರುವ ಈಶ್ವರಪ್ಪ ಅವರು, ನಾನು ಕುಟುಂಬದವರ ಜೊತೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾಗ ಮೊದಲು 7019994981 ನಂಬರ್ನಿಂದ ಕರೆ ಬಂತು. ಕರೆ ಮಾಡಿದ ವ್ಯಕ್ತಿ "ನೀನು ಈಶ್ವರಪ್ಪನೇ, ಮಾಜಿ ಡಿಸಿಎಂ ಅವರಾ?" ಎಂದು ಕೇಳಿದ. ಹೌದು ನಾನು ಈಶ್ವರಪ್ಪ ಮಾತನಾಡುತ್ತಿರುವುದು ಅಂದೆ. ಆಗ ಆತ ನನ್ನನ್ನು ನಿಂದಿಸಲು ಶುರು ಮಾಡಿದ. ನನಗೆ ಅದು ಸರಿಯಾಗಿ ಕೇಳುತ್ತಿರಲಿಲ್ಲ. ಆಗ ನಾನು, ಚಿತ್ರಮಂದಿರದಲ್ಲಿದ್ದೇನೆ. ಆಮೇಲೆ ಕರೆ ಮಾಡಿ ಎಂದೆ. ಆದರೂ ಆತ ಬಿಟ್ಟೂಬಿಡದೆ ಬೈಯುತ್ತಾ ಕರೆ ಕಟ್ ಮಾಡಿದ. ನಂತರ ಆತ ಮತ್ತೆ ಕರೆ ಮಾಡಲಿಲ್ಲ ಎಂದು ತಿಳಿಸಿದ್ದಾರೆ.
ಇದಾದ 2 ಗಂಟೆ ಬಳಿಕ ಮತೊಬ್ಬ 982358527 ನಂಬರ್ನಿಂದ ಕರೆ ಮಾಡಿ, ನೀವು ಈಶ್ವರಪ್ಪನವರೇ? ಎಂದು ಕೇಳಿದ. ನೀವು ಜಮೀರ್ ಅಹಮದ್ ಅವರ ಬಗ್ಗೆ ಏನೇನು ಮಾತನಾಡಿದ್ದೀರಿ, ನಾನು ನಿಮಗೆ ದಾಖಲೆ ಕೊಡುತ್ತೇನೆ ಎಂದ. ನಾನು ಕೊಡಿ ಎಂದೆ. ಆಗ ಆತ ಕೂಡ ಫೋನ್ ಕಟ್ ಮಾಡಿದ. ಇಲ್ಲಿ ಇಬ್ಬರು ಸಹ ನನಗೆ ಒಂದು ರೀತಿ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ತಕ್ಷಣ ಇಬ್ಬರನ್ನು ಗುರುತಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ನನಗೆ ಈ ಹಿಂದೆಯೂ ಬೆದರಿಕೆ ಬಂದಿವೆ. ಆಗಲೂ ಸಹ ನಾನು ಮನವಿ ಮಾಡಿಕೊಂಡಿದ್ದೆ. ಆದರೆ, ಈವರೆಗೂ ಆರೋಪಿಗಳನ್ನು ಹಿಡಿದಿಲ್ಲ. ಈಗಲಾದರೂ ಆರೋಪಿಗಳನ್ನು ಬಂಧಿಸಬೇಕು ಎಂದರು.