ಬರದಿಂದ 60 ಸಾವಿರ ಕೋಟಿ ನಷ್ಟ: ಈ ವರ್ಷ ಕರ್ನಾಟಕದಲ್ಲಿ ಬರ ಪರಿಸ್ಥಿತಿ 'ಅತ್ಯಂತ ಗಂಭೀರವಾಗಿದೆ' - ಡಿಸಿಎಂ ಪರಮೇಶ್ವರ್

ರಾಜ್ಯದ ಬಹುತೇಕ ಭಾಗಗಳಲ್ಲಿ ಬರ ಪರಿಸ್ಥಿತಿ 'ಅತ್ಯಂತ ಗಂಭೀರ'ವಾಗಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಕೃಷಿ ಉತ್ಪಾದನೆಯಲ್ಲಿ ಭಾರಿ ನಷ್ಟ ಉಂಟಾಗಿದ್ದು, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಕುಡಿಯುವ ನೀರಿನ ಕೊರತೆಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.
G Parameshwara
ಡಿಸಿಎಂ ಪರಮೇಶ್ವರ್
Updated on: 

ಬೆಂಗಳೂರು: ರಾಜ್ಯದ ಬಹುತೇಕ ಭಾಗಗಳಲ್ಲಿ ಬರ ಪರಿಸ್ಥಿತಿ 'ಅತ್ಯಂತ ಗಂಭೀರ'ವಾಗಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಕೃಷಿ ಉತ್ಪಾದನೆಯಲ್ಲಿ ಭಾರಿ ನಷ್ಟ ಉಂಟಾಗಿದ್ದು, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಕುಡಿಯುವ ನೀರಿನ ಕೊರತೆಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿಯನ್ನು ಕೋರಿ ರಾಜ್ಯ ಸರ್ಕಾರವು ಮೂರನೇ ಮನವಿ ಪತ್ರವನ್ನು ಸಿದ್ಧಪಡಿಸುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ಸಲ್ಲಿಸುತ್ತೇವೆ. ಕೇಂದ್ರದ ನೆರವಿಗಾಗಿ ಕಾಯದೆ ರಾಜ್ಯ ಸರ್ಕಾರವು ತನ್ನದೇ ಆದ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದರು.

ಕಂದಾಯ ಖಾತೆ ಹೊಂದಿರುವ ಪರಮೇಶ್ವರ್, ತಾವು ಉತ್ತರ ಕರ್ನಾಟಕದ ಕೆಲವು ಭಾಗಗಳು ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದ್ದರೂ, ರಾಜ್ಯದ ಬಹುತೇಕ ಕಡೆಗಳಲ್ಲಿ ಬರಗಾಲದ ತೀವ್ರತೆ ಕಡಿಮೆಯಾಗಿಲ್ಲ. ಕೃಷಿ ಉತ್ಪಾದನೆಯಲ್ಲಿ ಅಂದಾಜು ಶೇಕಡಾ 82ರಷ್ಟು ನಷ್ಟವಾಗಿದೆ. ಜಾನುವಾರುಗಳಿಗೆ ಮೇವಿನ ಲಭ್ಯತೆ ಕಡಿಮೆಯಾಗಿದೆ. ಕುಡಿಯುವ ನೀರಿನ ಕೊರತೆಯು ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ವಿವರಿಸಿದರು.

G Parameshwara
ಕಬ್ಬು ರೈತರ ‘ಹುಬ್ಬಳ್ಳಿ ಚಲೋ’ ಪ್ರತಿಭಟನಾ ಮೆರವಣಿಗೆ ತಾತ್ಕಾಲಿಕ ಸ್ಥಗಿತ: ಸರ್ಕಾರಕ್ಕೆ ನವೆಂಬರ್ 26 ಗಡುವು

ಹಲವು ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ಮತ್ತು ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಆದಾಗ್ಯೂ, ಈಗಿರುವ ನೀರಿನ ಮೂಲಗಳು ಬತ್ತಿಹೋದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಆಗ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವುದು ಕೂಡ ಕಷ್ಟಕರವಾಗಬಹುದು ಎಂದು ಎಚ್ಚರಿಸಿದರು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಬೆಳೆ ನಷ್ಟವನ್ನು ಅಂದಾಜಿಸಲಾಗಿದೆ. ಈ ಮೌಲ್ಯಮಾಪನಗಳ ಆಧಾರದ ಮೇಲೆ, 'ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ' (NDRF) ನಿಯಮಗಳ ಅಡಿಯಲ್ಲಿ ರಾಜ್ಯವು ನೆರವನ್ನು ಕೋರುತ್ತಿದೆ ಎಂದು ಪರಮೇಶ್ವರ್ ಹೇಳಿದರು.

ರಾಜ್ಯದ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬರಗಾಲದಿಂದ ಉಂಟಾಗಿರುವ ನಷ್ಟವು 60,000 ಕೋಟಿ ರೂಪಾಯಿಗಳನ್ನು ಮೀರಬಹುದು ಎಂದು ಅವರು ಇತ್ತೀಚೆಗೆ ಹೇಳಿದ್ದರು. ಕೇಂದ್ರಕ್ಕೆ ನಿಯೋಗವೊಂದನ್ನು ಕರೆದೊಯ್ಯಬೇಕೇ ಅಥವಾ ಉಪ ಮುಖ್ಯಮಂತ್ರಿ ಅಥವಾ ಬೇರೆ ಯಾರನ್ನಾದರೂ ನಿಯೋಗದೊಂದಿಗೆ ಕಳುಹಿಸಿ ಮನವಿ ಪತ್ರವನ್ನು ಸಲ್ಲಿಸಬೇಕೇ ಎಂಬ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ಧರಿಸಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

ಕೇಂದ್ರ ಸರ್ಕಾರವು ಅಗತ್ಯ ನೆರವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ ಪರಮೇಶ್ವರ್, ಈ ಅನುದಾನವು ಬರಗಾಲದಿಂದ ತೊಂದರೆಗೀಡಾದ ರೈತರಿಗೆ ಮತ್ತು ಇತರರಿಗೆ ಪರಿಹಾರ ಒದಗಿಸಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com