ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ: ಗಜಪಡೆಗೆ ಸಿಂಗಾರ, ಅಂಬಾರಿ ಹೊರಲು ಪ್ರಶಾಂತ ಸಜ್ಜು

ಈ ಬಾರಿ ಕ್ಯಾಪ್ಟನ್ ಪ್ರಶಾಂತ ಆನೆ ಮೊದಲ ಬಾರಿಗೆ ಚಾಮುಂಡೇಶ್ವರಿ ಉತ್ಸವಮೂರ್ತಿ ಇರುವ ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆಯನ್ನು ಬಣ್ಣ ಬಣ್ಣದ ಚಿತ್ತಾರಗಳಿಂದ ಕಲಾವಿದರು ಸಿಂಗರಿಸಿದ್ದಾರೆ.
File image
ಸಂಗ್ರಹ ಚಿತ್ರ
Updated on: 

ಮೈಸೂರು: ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ. ಹಸಿರು ಸೀರೆಯಲ್ಲಿ ತಾಯಿ ಚಾಮುಂಡೇಶ್ವರಿ ಕಂಗೊಳಿಸಿದ್ದಾಳೆ. ಚಿನ್ನದ ಅಂಬಾರಿ ಹೊರಲು ಕ್ಯಾಪ್ಟನ್‌ ಪ್ರಶಾಂತ ಸಿದ್ಧನಾಗಿದ್ದಾನೆ.

ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ತೆರೆದ ವಿಶೇಷ ವಾಹನದಲ್ಲಿ ಮೆರವಣಿಗೆ ಹೊರಟಿದೆ. ಮಂಗಳವಾದ್ಯದೊಂದಿಗೆ ಅರಮನೆ ವರೆಗೆ ಉತ್ಸವ ಮೂರ್ತಿ ಮೆರವಣಿಗೆ ಸಾಗಿದೆ. ಭಕ್ತರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ತಾಯಿಯ ದರ್ಶನ ಪಡೆದರು.

ಈ ಬಾರಿ ಕ್ಯಾಪ್ಟನ್ ಪ್ರಶಾಂತ ಆನೆ ಮೊದಲ ಬಾರಿಗೆ ಚಾಮುಂಡೇಶ್ವರಿ ಉತ್ಸವಮೂರ್ತಿ ಇರುವ ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆಯನ್ನು ಬಣ್ಣ ಬಣ್ಣದ ಚಿತ್ತಾರಗಳಿಂದ ಕಲಾವಿದರು ಸಿಂಗರಿಸಿದ್ದಾರೆ.

ಸೊಂಡಿಲು, ಕಿವಿ, ದಂತ, ಕಾಲು ಹಾಗೂ ಅದರ ಬಾಲದ ಮೇಲೆ ಗಂಡುಬೇರುಂಡ, ಶಂಖ, ಎಲೆ ಆಕಾರ ಸೇರಿದಂತೆ ವಿವಿಧ ರೀತಿಯ ಚಿತ್ತಾರವನ್ನು ಬಿಡಿಸಿ ಸಜ್ಜುಗೊಳಿಸಿದ್ದಾರೆ.

File image
ದಸರಾ ಸಂಭ್ರಮ: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಹೇಗಿತ್ತು ನೋಡಿ...; Video

ಇಂದು ಸಂಜೆ 4:10ರಿಂದ 4:35ರವರೆಗಿನ ಶುಭ ಮೀನ ಲಗ್ನದಲ್ಲಿ ಮೈಸೂರು ಅರಮನೆಯ ಮುಂಭಾಗದಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿ ದೇವಿಗೆ CM ಡಿಕೆ ಶಿವಕುಮಾರ್‌ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಸಂಜೆ 4.35: ಅಂಬಾವಿಲಾಸ ಅರಮನೆಯಿಂದ ಜಂಬೂಸವಾರಿ ಆರಂಭವಾಗಲಿದೆ.

ಅರಮನೆ ಅಂಗಳದಿಂದ ಹೊರಡುವ ಜಂಬೂಸವಾರಿಯು ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಿ ಬನ್ನಿಮಂಟಪ ಮೈದಾನವನ್ನು ತಲುಪಲಿದೆ. ಈ ಭವ್ಯ ಹಾದಿಯಲ್ಲಿ ಕರ್ನಾಟಕದ ವಿಭಿನ್ನ ಸಂಸ್ಕೃತಿಯನ್ನು ಬಿಂಬಿಸುವ 70ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮತ್ತು ವಿವಿಧ ಜಿಲ್ಲೆಗಳ ಆಕರ್ಷಕ 32 ಸ್ತಬ್ಧಚಿತ್ರಗಳು ಪ್ರದರ್ಶನಗಳು ನಡೆಯಲಿದೆ.

ಜಂಬೂಸವಾರಿ ಮೆರವಣಿಗೆಯಲ್ಲಿ 13 ಆನೆಗಳ ಪೈಕಿ 12 ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಈ ಬಾರಿ ಧನಂಜಯನಿಗೆ ಮೆರವಣಿಗೆಯಿಂದ ಕೊಕ್ ನೀಡಲಾಗಿದೆ. ಅಭಿಮನ್ಯು ನಿಶಾನೆ ಆನೆ ಜವಾಬ್ದಾರಿ ನಿರ್ವಹಿಸಲಿದ್ದಾನೆ. ಲಕ್ಷ್ಮಿ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಮೆರವಣಿಗೆಯಲ್ಲಿ ಸಾಗಲಿವೆ. ಗೋಪಿ – ನೌಪತ್ ಆನೆ ಹಾಗೂ ಶ್ರೀಕಂಠ , ಏಕಲವ್ಯ, ಮಹೇಂದ್ರ, ಸುಗ್ರೀವ, ಶ್ರೀರಾಮ, ರೂಪಾ, ಮತ್ತು ಚೈತ್ರಾ ಸಾಲಾನೆಗಳಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com