

ಬೆಂಗಳೂರು: ಎಂ3ಎಂ ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿ–2026ರ ಪ್ರಕಾರ, ಮೆಟ್ರೊಪಾಲಿಟನ್ ಸಿಟಿ 1,000 ಕೋಟಿ ರೂಪಾಯಿಗೂ ಅಧಿಕ ಸಂಪತ್ತು ಹೊಂದಿರುವ 129 ಮಂದಿ ಇದ್ದಾರೆ. ನಗರದ ಸಾಂಪ್ರದಾಯಿಕ ಐಷಾರಾಮಿ ವಸತಿ ಪ್ರದೇಶಗಳಲ್ಲಿ ನಿವೇಶನಗಳ ಕೊರತೆಯಿಂದಾಗಿ ಶ್ರೀಮಂತರು ಮನೆ, ನಿವೇಶನ ಅಥವಾ ಜಮೀನು ಖರೀದಿಗೆ ಹೊಸ ಪ್ರದೇಶಗಳತ್ತ, ವಿಶೇಷವಾಗಿ ಉತ್ತರ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ ಎಂದು ರಿಯಲ್ ಎಸ್ಟೇಟ್ ತಜ್ಞರು ತಿಳಿಸಿದ್ದಾರೆ.
ಬೆಂಗಳೂರಿನ ಬೇರೆ ಭಾಗಕ್ಕೆ ಹೋಲಿಸಿದರೆ ಉತ್ತರ ಭಾಗದಲ್ಲಿ ವಿಶಾಲ ನಿವೇಶನಗಳು ಲಭ್ಯವಿರುವುದರಿಂದ ಇಲ್ಲಿ ಹೆಚ್ಚು ಸ್ಥಳಾವಕಾಶವಿರುವ, ಕಡಿಮೆ ಜನಸಾಂದ್ರತೆಯ ವಸತಿ ಸಮುದಾಯಗಳನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
ಬೆಂಗಳೂರಿನ ಹೃದಯ ಭಾಗಗಳಾದ ಸದಾಶಿವನಗರ, ವಿಠಲ್ ಮಲ್ಯ ರಸ್ತೆ, ಲ್ಯಾವೆಲ್ಲೆ ರಸ್ತೆ ಮತ್ತು ಕೋರಮಂಗಲದಂತಹ ಸಾಂಪ್ರದಾಯಿಕ ಐಷಾರಾಮಿ ಪ್ರದೇಶಗಳಲ್ಲಿ ಮನೆ, ನಿವೇಶನಗಳು ಹೆಚ್ಚಿನ ಬೆಲೆಯನ್ನು ಕಾಯ್ದುಕೊಂಡಿವೆ. ಆದರೆ, ಈ ಭಾಗಗಳಲ್ಲಿ ಭೂಮಿಯ ಲಭ್ಯತೆ ಸೀಮಿತವಾಗಿರುವುದರಿಂದ ಹೊಸದಾಗಿ ವಿಶಾಲವಾದ ಐಷಾರಾಮಿ ಮನೆಗಳನ್ನು ನಿರ್ಮಿಸುವ ಅವಕಾಶಗಳು ಕಡಿಮೆಯಾಗುತ್ತಿವೆ.
ಐಷಾರಾಮಿ ವಸತಿ ಪ್ರದೇಶಗಳಲ್ಲಿ ನಿವೇಶನಗಳು ಮಾರುಕಟ್ಟೆಗೆ ಮಾರಾಟಕ್ಕೆ ಬರುತ್ತಲೇ ಇಲ್ಲ. ದೊಡ್ಡ ನಿವೇಶನವೊಂದು ಮಾರಾಟಕ್ಕೆ ಬಂದರೂ ಸಾಮಾನ್ಯವಾಗಿ ಅದು ಕುಟುಂಬದೊಳಗಿನ ಆಸ್ತಿ ಮಾರಾಟವಾಗಿರುತ್ತದೆ. ಅದರ ಬೆಲೆಯೂ ಕೆಲವೇ ಕೆಲವು ಖರೀದಿದಾರರಿಗೆ ಮಾತ್ರ ಕೈಗೆಟುಕುವಂತಿರುತ್ತದೆ ಎಂದು ಕೃಷ್ವಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅರ್ಹಂತ್ ದಿನೇಶ್ ಹೇಳುತ್ತಾರೆ.
ಹೀಗಾಗಿ ಬೆಂದಳೂರಿನಲ್ಲಿ ಮನೆ, ನಿವೇಶನ ಖರೀದಿ ಮಾಡಬೇಕೆಂದಿರುವವರು ಉತ್ತರ ಮತ್ತು ಈಶಾನ್ಯ ಬೆಂಗಳೂರು ಪ್ರದೇಶಗಳನ್ನು ಹುಡುಕುತ್ತಾರೆ ಎಂದು ದಿನೇಶ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣ, ಹೆಣ್ಣೂರು, ಬಾಗಲೂರು ಮತ್ತು ಯಲಹಂಕ ಕಾರಿಡಾರ್‌ಗಳು, ತಂತ್ರಜ್ಞಾನ ಪಾರ್ಕ್‌ಗಳು ಹಾಗೂ ಉತ್ತಮ ಶಾಲೆಗಳು ನಗರದ ಅಭಿವೃದ್ಧಿಯ ಕೇಂದ್ರಬಿಂದುವನ್ನು ಉತ್ತರದತ್ತ ಸರಿಸಿವೆ ಎಂದು ಹೇಳುತ್ತಾರೆ.
ಬೆಂಗಳೂರು ಉತ್ತರದಲ್ಲಿ ಏನು ಅನುಕೂಲ?
ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿ ಸಿಗದ ಹಲವು ಅನುಕೂಲಗಳು ಯಲಹಂಕದಲ್ಲಿ ಲಭ್ಯವಿವೆ. ವಿಶಾಲ ಭೂಪ್ರದೇಶ, ದೊಡ್ಡ ನಿವೇಶನಗಳು, ಕಡಿಮೆ ಜನಸಾಂದ್ರತೆ ಮತ್ತು ಉತ್ತಮ ಸೌಲಭ್ಯಗಳನ್ನು ಹೊಂದಿರುವ ವಸತಿ ಸಮುದಾಯಗಳನ್ನು ನಿರ್ಮಿಸಲು ಇಲ್ಲಿ ಅವಕಾಶವಿದೆ. ವಿಮಾನ ನಿಲ್ದಾಣವೂ ಕೇವಲ 20 ನಿಮಿಷಗಳ ದೂರದಲ್ಲಿದೆ.
ಆದರೆ, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು ಮತ್ತು ಹಳೆಯ ಬೆಂಗಳೂರಿನಲ್ಲಿರುವಂತೆ ಕಾಲ್ನಡಿಗೆಯಲ್ಲೇ ಸುತ್ತಾಡಬಹುದಾದ ಪ್ರದೇಶಗಳಂತಹ ಸಾಮಾಜಿಕ ಮೂಲಸೌಕರ್ಯಗಳ ಕೊರತೆ ಇಲ್ಲಿದೆ ಎನ್ನುತ್ತಾರೆ.
ಸೆಂಚುರಿ ರಿಯಲ್ ಎಸ್ಟೇಟ್‌ನ ಮಾರಾಟ, ಮಾರುಕಟ್ಟೆ ಮತ್ತು ಗ್ರಾಹಕ ಸಂಬಂಧ ನಿರ್ವಹಣೆ ವಿಭಾಗದ ನಿರ್ದೇಶಕ ಮನೀಂದರ್ ಛಾಬ್ರಾ, “2024–25ರಿಂದ 2025–26ರ ಹಣಕಾಸು ವರ್ಷಗಳ ನಡುವೆ ಸೆಂಚುರಿ ರಿಯಲ್ ಎಸ್ಟೇಟ್‌ನ ಐಷಾರಾಮಿ ವಸತಿ ವಿಭಾಗದಲ್ಲಿ ಗ್ರಾಹಕರ ವಿಚಾರಣೆಗಳು ಶೇ.477ರಷ್ಟು ಹೆಚ್ಚಾಗಿದ್ದು, ಒಟ್ಟು ಮಾರಾಟ ಮೌಲ್ಯದಲ್ಲಿ ಶೇ.355ರಷ್ಟು ಏರಿಕೆಯಾಗಿದೆ. ನೈಟ್ ಫ್ರಾಂಕ್ ಇಂಡಿಯಾದ 2026ರ ಮೊದಲಾರ್ಧದ ವರದಿಯೂ 2ರಿಂದ 5 ಕೋಟಿ ರೂಪಾಯಿ ಬೆಲೆಯ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ಉತ್ತರ ಬೆಂಗಳೂರು, ವಿಶೇಷವಾಗಿ ಯಲಹಂಕ ಮತ್ತು ವಿಮಾನ ನಿಲ್ದಾಣದ ಕಾರಿಡಾರ್, ಉತ್ತಮ ಮೂಲಸೌಕರ್ಯ, ಹಸಿರು ಪ್ರದೇಶಗಳು, ಶುದ್ಧ ಗಾಳಿ, ವಿಸ್ತರಿಸುತ್ತಿರುವ ಉದ್ಯೋಗ ಕೇಂದ್ರಗಳು ಹಾಗೂ ಉತ್ತಮ ಜೀವನಶೈಲಿ ಸೌಲಭ್ಯಗಳಿಂದಾಗಿ ಹೆಚ್ಚು ಮಹತ್ವ ಪಡೆಯುತ್ತಿದೆ ಎಂದು ಛಾಬ್ರಾ ಹೇಳುತ್ತಾರೆ.
ನೈಟ್ ಫ್ರಾಂಕ್ ಇಂಡಿಯಾದ 2026ರ ಮೊದಲಾರ್ಧದ ವರದಿಯನ್ನು ಉಲ್ಲೇಖಿಸಿದ ಅವರು, ಈ ಪ್ರದೇಶದಲ್ಲಿ ವಸತಿ ಮಾರಾಟವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.11ರಷ್ಟು ಹಾಗೂ ಹೊಸ ವಸತಿ ಯೋಜನೆಗಳ ಆರಂಭ ಶೇ.10ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು ನಗರದ ಒಟ್ಟು ವಸತಿ ಮಾರಾಟದಲ್ಲಿ ಈ ಪ್ರದೇಶದ ಪಾಲು ಶೇ.31ರಷ್ಟಿದ್ದರೆ, ಹೊಸ ಯೋಜನೆಗಳ ಆರಂಭದಲ್ಲಿ ಶೇ.29ರಷ್ಟು ಪಾಲು ಹೊಂದಿದೆ ಎಂದು ಹೇಳಿದ್ದಾರೆ.
ಬ್ರಿಗೇಡ್ ಗ್ರೂಪ್‌ನ ವಸತಿ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವ ಪ್ರತಾಪ್ ದೇಸು, ತಂತ್ರಜ್ಞಾನ ಕ್ಷೇತ್ರ, ಉದ್ಯಮಶೀಲತೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಮೂಲಕ ಸಂಪತ್ತು ಸೃಷ್ಟಿಯಾಗುತ್ತಿರುವುದು ವಸತಿ ಮಾರುಕಟ್ಟೆಯಲ್ಲಿ ಐಷಾರಾಮಿ ಮನೆಗಳ ಬೇಡಿಕೆ ಹೆಚ್ಚಲು ಕಾರಣವಾಗಿದೆ ಎಂದು ಹೇಳಿದ್ದಾರೆ.
ಸಾಂಪ್ರದಾಯಿಕ ಐಷಾರಾಮಿ ಪ್ರದೇಶಗಳಲ್ಲಿ ಭೂಮಿ ಕೊರತೆಯು ಆ ಪ್ರದೇಶಗಳ ವಿಶೇಷತೆಯನ್ನು ಉಳಿಸಲಿದೆ. ಇದೇ ವೇಳೆ, ಹೆಚ್ಚು ಸ್ಥಳಾವಕಾಶ ಮತ್ತು ಕಡಿಮೆ ಜನಸಾಂದ್ರತೆಯ ಜೀವನಶೈಲಿಯನ್ನು ಒದಗಿಸುವ ಹೊಸ ಪ್ರದೇಶಗಳತ್ತ ಖರೀದಿದಾರರ ಬೇಡಿಕೆಯೂ ಹೆಚ್ಚಲಿದೆ ಎಂದು ದೇಸು ಹೇಳಿದ್ದಾರೆ.
ನಗರದ ಕೇಂದ್ರ ಭಾಗದ ಸಮೀಪದಲ್ಲಿ ದಿನದಿಂದ ದಿನಕ್ಕೆ ಅಪರೂಪವಾಗುತ್ತಿರುವ ದೊಡ್ಡ ನಿವೇಶನಗಳು, ಹಸಿರು ಪರಿಸರ ಮತ್ತು ವಿಶಾಲವಾದ, ಯೋಜಿತ ಐಷಾರಾಮಿ ವಸತಿ ಸಮುದಾಯಗಳು ಯಲಹಂಕದಲ್ಲಿ ಲಭ್ಯವಿವೆ ಎಂದು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಬೆಂಗಳೂರಿನ ಐಷಾರಾಮಿ ವಸತಿ ಮಾರುಕಟ್ಟೆಯು ಒಂದೇ ಪ್ರದೇಶಕ್ಕೆ ಸೀಮಿತವಾಗದೆ, ಹಲವು ಕೇಂದ್ರಗಳಲ್ಲಿ ಬೆಳವಣಿಗೆ ಕಾಣಲಿದೆ ಎಂದು ದೇಸು ಹೇಳಿದ್ದಾರೆ.
ಉತ್ತರ ಬೆಂಗಳೂರಿನಲ್ಲಿ ದೇವನಹಳ್ಳಿ ಸಮೀಪದ ಎಸ್‌ಟಿಆರ್‌ಆರ್ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಪ್ರದೇಶ, ವೈಟ್‌ಫೀಲ್ಡ್, ಹಳೆಯ ಮದ್ರಾಸ್ ರಸ್ತೆ (ಬೂದಿಗೆರೆ ವಲಯ) ಮತ್ತು ದಕ್ಷಿಣ ಬೆಂಗಳೂರಿನ ಆಯ್ದ ಕಾರಿಡಾರ್‌ಗಳಲ್ಲಿ ಇಂತಹ ವಸತಿ ಅಭಿವೃದ್ಧಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ನಿರೀಕ್ಷೆಯಿದೆ” ಎಂದು ಅವರು ಹೇಳಿದ್ದಾರೆ.
ಕಾನ್ಕಾರ್ಡ್ ಸಂಸ್ಥೆಯ ಮುಖ್ಯ ಮಾರಾಟ ಮತ್ತು ಮಾರುಕಟ್ಟೆ ಅಧಿಕಾರಿ ಕಾರ್ತಿಕ್ ಎಂ.ವಿ, ಯಲಹಂಕದಲ್ಲಿ ದೊಡ್ಡ ನಿವೇಶನಗಳು ಮತ್ತು ಯೋಜಿತ ವಸತಿ ಸಮುದಾಯಗಳ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ ಎಂದು ಹೇಳಿದ್ದಾರೆ. ಆದರೆ, ಈಗಾಗಲೇ ಅಭಿವೃದ್ಧಿಯಾಗಿರುವ ಐಷಾರಾಮಿ ವಸತಿ ಪ್ರದೇಶಗಳು ಉತ್ತಮ ಮೂಲಸೌಕರ್ಯ ಮತ್ತು ಬೆಂಗಳೂರು ನಗರದ ಕೇಂದ್ರ ಭಾಗಕ್ಕೆ ಸಮೀಪದಲ್ಲಿರುವ ಅನುಕೂಲವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.
ಉತ್ತರ ಬೆಂಗಳೂರಿನ ಈ ಪ್ರದೇಶದ ದೀರ್ಘಕಾಲೀನ ಆಕರ್ಷಣೆಯು ನಾಗರಿಕ ಮೂಲಸೌಕರ್ಯ, ನೀರಿನ ಲಭ್ಯತೆ ಮತ್ತು ಕೊನೆಯ ಹಂತದ ಸಂಪರ್ಕ ವ್ಯವಸ್ಥೆಯ ಸುಧಾರಣೆಯನ್ನು ಅವಲಂಬಿಸಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.