ಮತ್ತೆ ಚಲಿಸಲಿದೆ ರಾಜವೈಭವದ ಸುವರ್ಣ ರಥ: ಹೊಸ ರೂಪದಲ್ಲಿ ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ Golden Chariot ರೈಲು, ಮೊದಲ ಪ್ರಯಾಣದ ಟಿಕೆಟ್ ಸೋಲ್ಡ್ ಔಟ್..!

ಹೊಸ ರೂಪದೊಂದಿಗೆ ವನ್ಯಜೀವಿ, ರಾಜವೈಭವ, ವಿಶ್ವ ಪರಂಪರೆಯ ತಾಣಗಳು, ಕಾಫಿ ನಾಡು ಮತ್ತು ಕರಾವಳಿ ಪ್ರವಾಸದ ಅನುಭವಗಳನ್ನು ಒಳಗೊಂಡ ವಿಶೇಷ ಪ್ರವಾಸಗಳನ್ನು ಈ ಬಾರಿ ಆಯೋಜಿಸಲಾಗಿದೆ.
Golden Chariot
ಗೋಲ್ಡನ್ ಚಾರಿಯಟ್
Updated on: 

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಹಾಗೂ ಪ್ರಮುಖ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ (ಸುವರ್ಣ ರಥ) ತನ್ನ 2026-27ರ ಹೊಸ ಪ್ರವಾಸದ ಸರಣಿಯನ್ನು ಶನಿವಾರದಿಂದ (ಅಕ್ಟೋಬರ್ 24) ಅಧಿಕೃತವಾಗಿ ಆರಂಭಿಸಲಿದೆ.

ಸಂಪೂರ್ಣ ಹೊಸ ರೂಪದಲ್ಲಿ ಹಳಿಗೆ ಮರಳುತ್ತಿರುವ ಈ ಐಷಾರಾಮಿ ರೈಲಿಗೆ ಪ್ರವಾಸಿಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಮೊದಲ ಐದು ರಾತ್ರಿ ಮತ್ತು ಆರು ದಿನಗಳ "ಪ್ರೈಡ್ ಆಫ್ ಕರ್ನಾಟಕ" ಪ್ರಯಾಣದ ಎಲ್ಲಾ ಟಿಕೆಟ್‌ಗಳು (100% ಬುಕಿಂಗ್) ಈಗಾಗಲೇ ಸಂಪೂರ್ಣವಾಗಿ ಮಾರಾಟವಾಗಿವೆ. ಈ ಉದ್ಘಾಟನಾ ಪ್ರಯಾಣದಲ್ಲಿ ಒಟ್ಟು 75 ದೇಶಿ ಮತ್ತು ವಿದೇಶಿ ಪ್ರವಾಸಿಗರು ರಾಯಲ್ ಪ್ರಯಾಣದ ಅನುಭವ ಪಡೆಯಲಿದ್ದಾರೆ.

ಹೊಸ ರೂಪದೊಂದಿಗೆ ವನ್ಯಜೀವಿ, ರಾಜವೈಭವ, ವಿಶ್ವ ಪರಂಪರೆಯ ತಾಣಗಳು, ಕಾಫಿ ನಾಡು ಮತ್ತು ಕರಾವಳಿ ಪ್ರವಾಸದ ಅನುಭವಗಳನ್ನು ಒಳಗೊಂಡ ವಿಶೇಷ ಪ್ರವಾಸಗಳನ್ನು ಈ ಬಾರಿ ಆಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಗೋಲ್ಡನ್ ಚಾರಿಯಟ್‌ ರೈಲನ್ನು ಕರ್ನಾಟಕದ ಪ್ರಮುಖ ಐಷಾರಾಮಿ ಪ್ರವಾಸೋದ್ಯಮ ಉತ್ಪನ್ನಗಳಲ್ಲಿ ಒಂದಾಗಿ ಬೆಳೆಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರವಾಸಿಗರ ಅನುಭವವನ್ನು ಉತ್ತಮಪಡಿಸುವುದು ಮತ್ತು ದೇಶೀಯ ಹಾಗೂ ಅಂತರರಾಷ್ಟ್ರೀಯ ಐಷಾರಾಮಿ ಪ್ರವಾಸೋದ್ಯಮವನ್ನು ಬಲಪಡಿಸುವುದಕ್ಕೆ ಆದ್ಯತೆ ನೀಡುವಂತೆ ಅವರು ನಿರ್ದೇಶಿಸಿದ್ದಾರೆ.

ಐದು ರಾತ್ರಿ, ಆರು ದಿನಗಳ ‘ಪ್ರೈಡ್ ಆಫ್ ಕರ್ನಾಟಕ’ ಪ್ರವಾಸದ ಮೊದಲ ಪ್ರಯಾಣಕ್ಕೆ ಶೇ.100ರಷ್ಟು ಮುಂಗಡ ಬುಕ್ಕಿಂಗ್ ಆಗಿದೆ. ಈ ಪ್ರಯಾಣದಲ್ಲಿ 75 ಪ್ರವಾಸಿಗರು ರೈಲಿನಲ್ಲಿ ಸಂಚರಿಸಲಿದ್ದು, ಅವರ ಸೇವೆಗಾಗಿ 60 ಸಿಬ್ಬಂದಿ ಇರಲಿದ್ದಾರೆ ಎಂದು ಇಲಾಖೆ ತಿಳಿಸಿದೆ.

Golden Chariot
ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನ.1ಕ್ಕೆ ಚಾಲನೆ!

ಈ ಪ್ರವಾಸದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮೈಸೂರು, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಮತ್ತು ಗೋವಾಕ್ಕೆ ಭೇಟಿ ನೀಡಲಾಗುತ್ತದೆ.

ಮೇಯಿಂದ ಆಗಸ್ಟ್‌ವರೆಗೆ ಮೈಸೂರಿನ ಕಾರ್ಯಾಗಾರದಲ್ಲಿ ರೈಲಿನ ನಿಗದಿತ ತಾಂತ್ರಿಕ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲಿನ ಹೊರಭಾಗವನ್ನು ನವೀಕರಿಸಲಾಗಿದ್ದು, ಒಳಗಿನ ಅಡುಗೆಮನೆಯನ್ನೂ ಆಧುನೀಕರಿಸಲಾಗಿದೆ.

2026-27ನೇ ಪ್ರವಾಸಿ ಋತುವಿನಲ್ಲಿ ಒಟ್ಟು 13 ಪ್ರವಾಸಗಳನ್ನು ಆಯೋಜಿಸಲಾಗಿದೆ. ‘ಪ್ರೈಡ್ ಆಫ್ ಕರ್ನಾಟಕ’ ಹೆಸರಿನಲ್ಲಿ ಏಳು, ‘ಗ್ಲಿಂಪ್ಸಸ್ ಆಫ್ ಕರ್ನಾಟಕ’ ಅಡಿಯಲ್ಲಿ ಮೂರು ಹಾಗೂ ‘ಜ್ಯುವೆಲ್ಸ್ ಆಫ್ ಸೌತ್’ ಹೆಸರಿನಲ್ಲಿ ಮೂರು ಪ್ರವಾಸಗಳು ನಡೆಯಲಿವೆ.

ಪ್ರವಾಸೋದ್ಯಮ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಮೊದಲ ಪ್ರವಾಸಕ್ಕೆ ಶೇ.100ರಷ್ಟು ಬುಕ್ಕಿಂಗ್ ಆಗಿರುವುದು ಉತ್ತಮ ಆರಂಭವಾಗಿದೆ. ಇಡೀ ಪ್ರವಾಸಿ ಋತುವಿನಾದ್ಯಂತ ಇದೇ ಬೇಡಿಕೆಯನ್ನು ಕಾಯ್ದುಕೊಳ್ಳುವುದು ಈಗಿನ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com