ಹುಬ್ಬಳ್ಳಿ ಮಹಿಳೆ ಕತ್ತು ಸೀಳಿದ ಮಾಂಜಾದಾರ: 'ಮನರಂಜನೆಗಾಗಿ ಮತ್ತೊಬ್ಬರ ಜೀವದ ಜೊತೆ ಆಟವಾಡಬೇಡಿ': DCM ಪರಮೇಶ್ವರ್ ಖಡಕ್ ಎಚ್ಚರಿಕೆ

ಮಾಂಜಾದಾರ ದುರಂತ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, 'ಅಪಾಯಕಾರಿ ಮಾಂಜಾ ದಾರದ ಮೇಲೆ ಈಗಾಗಲೇ ನಿಷೇಧವಿದ್ದರೂ ಅದರ ಮಾರಾಟ ಮತ್ತು ಬಳಕೆ..
Dr G Parameshwara
ಡಿಸಿಎಂ ಪರಮೇಶ್ವರ
Updated on: 

ಬೆಂಗಳೂರು: ಮಾಂಜಾದಾರದಿಂದ ಹುಬ್ಬಳ್ಳಿಯಲ್ಲಿ ಮಹಿಳೆಯ ಕತ್ತು ಸೀಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಕಿಡಿಕಾರಿರುವ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮಾಂಜಾದಾರ ದುರಂತ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, 'ಅಪಾಯಕಾರಿ ಮಾಂಜಾ ದಾರದ ಮೇಲೆ ಈಗಾಗಲೇ ನಿಷೇಧವಿದ್ದರೂ ಅದರ ಮಾರಾಟ ಮತ್ತು ಬಳಕೆ ಮುಂದುವರಿದಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯ ವಿದ್ಯಾ ಮಂಜುನಾಥ್ ಗೌಡರ್ ಅವರು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಹರಿತವಾದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟಿರುವ ಘಟನೆ ಅತ್ಯಂತ ನೋವಿನ ಸಂಗತಿ. ಇಂತಹ ದುರಂತಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಸಾರ್ವಜನಿಕರ ಸುರಕ್ಷತೆಯನ್ನು ನಿರ್ಲಕ್ಷಿಸುವುದರಿಂದ ಮತ್ತೊಂದು ತಡೆಯಬಹುದಾಗಿದ್ದ ದುರಂತ ಸಂಭವಿಸಿದೆ. ಅಮಾಯಕರ ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

"ಅಪಾಯಕಾರಿ ಮಾಂಜಾ ದಾರದ ಮೇಲೆ ಈಗಾಗಲೇ ನಿಷೇಧವಿದ್ದರೂ ಅದರ ಮಾರಾಟ ಮತ್ತು ಬಳಕೆ ಮುಂದುವರಿದಿರುವುದು ಆತಂಕಕಾರಿ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಈಗಿರುವ ಕಾನೂನು ನಿಯಮಗಳನ್ನು ಪರಿಶೀಲಿಸುವುದು ಹಾಗೂ ಅಗತ್ಯವಿದ್ದರೆ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು" ಎಂದು ಪರಮೇಶ್ವರ್ ತಿಳಿಸಿದ್ದಾರೆ.

Dr G Parameshwara
ಮಹಿಳೆ ಕತ್ತು ಸೀಳಿದ ಮಾಂಜಾ ದಾರ: ಅಂಗಡಿಗಳ ಮೇಲೆ ಹುಬ್ಬಳ್ಳಿ ಪೊಲೀಸರ ದಾಳಿ; ಅಪಾರ ಪ್ರಮಾಣದ ದಾರ ವಶಕ್ಕೆ! Video

'ಕೆಲವು ಕ್ಷಣದ ಮೋಜಿಗಾಗಿ ಮತ್ತೊಬ್ಬರ ಜೀವ ತೆಗೆಯಬೇಡಿ'

ಮಾಂಜಾ ದಾರದ ಬಳಕೆಯ ವಿಚಾರ ಕೇವಲ ಕಾನೂನು ಜಾರಿಗೆ ಸಂಬಂಧಿಸಿದ್ದಲ್ಲ. ಇದು ಮಾನವೀಯತೆ, ಆತ್ಮಸಾಕ್ಷಿ ಮತ್ತು ಸಾಮೂಹಿಕ ಜವಾಬ್ದಾರಿಯ ಪ್ರಶ್ನೆಯಾಗಿದೆ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.

"ಈ ಅಪಾಯಕಾರಿ ದಾರಗಳಿಂದಾಗಿ ಅನೇಕ ಅಮಾಯಕರು ಪ್ರಾಣ ಕಳೆದುಕೊಳ್ಳುವುದನ್ನು ನೋಡಿದ್ದೇವೆ. ಅಪಾಯದ ಅರಿವಿದ್ದರೂ ಇಂತಹ ದಾರಗಳನ್ನು ಬಳಸುವವರು, ತಮ್ಮ ಕೆಲವು ಕ್ಷಣಗಳ ಮನರಂಜನೆಗಾಗಿ ಮತ್ತೊಬ್ಬರ ಜೀವವನ್ನು ಬಲಿ ಪಡೆಯುವುದು ಸರಿಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಅವರು ಹೇಳಿದ್ದಾರೆ.

ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಅಪರಾಧ

ಇದೇ ವೇಳೆ ಅಮಾಯಕರ ಜೀವವನ್ನು ಉದ್ದೇಶಪೂರ್ವಕವಾಗಿ ಅಪಾಯಕ್ಕೆ ಸಿಲುಕಿಸುವುದು ಕೇವಲ ನಿರ್ಲಕ್ಷ್ಯವಲ್ಲ; ಅದು ಕ್ರಿಮಿನಲ್ ಅಪರಾಧವೂ ಆಗಬಹುದು. ಇಂತಹ ಕೃತ್ಯಗಳಿಗೆ ಕಾರಣರಾದವರು ಕಾನೂನಿನಡಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮಾಂಜಾ ದಾರದ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com