

ಬೆಂಗಳೂರು: ದೀರ್ಘಕಾಲದ ಮಳೆ ಕೊರತೆ, ಕುಸಿಯುತ್ತಿರುವ ಅಂತರ್ಜಲ ಮಟ್ಟ ಹಾಗೂ ಹೆಚ್ಚುತ್ತಿರುವ ತಾಪಮಾನದಿಂದಾಗಿ ಜಲಮೂಲಗಳ ಸಂರಕ್ಷಣೆಯ ಅಗತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಂದಿಬೆಟ್ಟದ ಜಲಾನಯನ ಪ್ರದೇಶವನ್ನು ಪುನರುಜ್ಜೀವನಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಅರಣ್ಯ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ‘ಜಲಾನಯನಕ್ಕಾಗಿ ಅರಣ್ಯಗಳು – ನಂದಿಬೆಟ್ಟ ಯೋಜನೆ’ಯನ್ನು ಶುಕ್ರವಾರ ಘೋಷಿಸಲಾಗಿದೆ.
ಈ ಯೋಜನೆಯಡಿ ಮಣ್ಣಿನ ಗುಣಮಟ್ಟ ಸುಧಾರಿಸುವುದು, ಜೀವವೈವಿಧ್ಯವನ್ನು ಪುನಃಸ್ಥಾಪಿಸುವುದು, ಜಲಾನಯನ ಪ್ರದೇಶವನ್ನು ಸಂರಕ್ಷಿಸುವುದು ಹಾಗೂ ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
“ಜಲಾನಯನ ಪ್ರದೇಶ ಮತ್ತು ಅದರ ಜಲಮೂಲಗಳನ್ನು ರಕ್ಷಿಸಿ ಸಂರಕ್ಷಿಸುವುದು, ಮಣ್ಣಿನ ಗುಣಮಟ್ಟ ಸುಧಾರಿಸುವುದು, ಜೀವವೈವಿಧ್ಯವನ್ನು ಪುನಃಸ್ಥಾಪಿಸುವುದು ಹಾಗೂ ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯ ಕಲ್ಪಿಸುವ ಉದ್ದೇಶದೊಂದಿಗೆ ಕೈಗೊಳ್ಳಲಾಗುತ್ತಿರುವ ಮೊದಲ ಯೋಜನೆ ಇದಾಗಿದೆ” ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ ತಿಳಿಸಿದ್ದಾರೆ.
600 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ
ಪ್ರಾಯೋಗಿಕ ಯೋಜನೆಯಾಗಿ ನಂದಿಬೆಟ್ಟ ಮತ್ತು ಸುತ್ತಮುತ್ತಲಿನ ಒಟ್ಟು 600 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದೆ. ಇದರಲ್ಲಿ 300 ಹೆಕ್ಟೇರ್ ಅರಣ್ಯ ಇಲಾಖೆಗೆ ಸೇರಿದ್ದರೆ, ಉಳಿದ 300 ಹೆಕ್ಟೇರ್ ಕೃಷಿ ಭೂಮಿಯಾಗಿದೆ.
ಈ ಯೋಜನೆಗಾಗಿ ಅರಣ್ಯ ಇಲಾಖೆಯು ‘ಐಯೋರಾ ಇಕಲಾಜಿಕಲ್ ಫಸ್ಟ್’ ಎಂಬ ಸರ್ಕಾರೇತರ ಸಂಸ್ಥೆ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಯಾದ ‘ಸೇಲ್ಸ್‌ಫೋರ್ಸ್’ ಜೊತೆ ಕೈಜೋಡಿಸಿದೆ. ಕರ್ನಾಟಕ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನದ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.
ಯೋಜನೆಯಡಿ ಚಿಕ್ಕಬಳ್ಳಾಪುರ ಅರಣ್ಯ ವಿಭಾಗದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಿ, ಅವುಗಳ ಬದಲಿಗೆ 1.8 ಲಕ್ಷ ಸ್ಥಳೀಯ ಪ್ರಭೇದದ ಮರಗಳನ್ನು ನೆಡಲು ಉದ್ದೇಶಿಸಲಾಗಿದೆ. ಜತೆಗೆ, ಚೆಕ್‌ಡ್ಯಾಂಗಳು ಮತ್ತು ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸಿರುವ ಬಾಹ್ಯರೇಖಾ ಕಂದಕಗಳನ್ನು (Contour Trenches) ಸಂರಕ್ಷಿಸಿ ಪುನಶ್ಚೇತನಗೊಳಿಸಲಾಗುತ್ತದೆ.
ಮಳೆನೀರು ಭೂಮಿಯೊಳಗೆ ಇಂಗುವಂತೆ ಮಾಡಲು ಇಂಗುಗುಂಡಿಗಳನ್ನೂ ನಿರ್ಮಿಸಲಾಗುತ್ತದೆ. ಅಲ್ಲದೆ ಸ್ಥಳೀಯ ಅರಣ್ಯ ಸಮಿತಿಗಳ ಸಹಯೋಗದಲ್ಲಿ ಸಸಿಗಳ ನರ್ಸರಿ ನಿರ್ವಹಣೆ ಕುರಿತು ತರಬೇತಿ ನೀಡುವುದು, ನೆಟ್ಟ ಸಸಿಗಳ ದೀರ್ಘಕಾಲದ ರಕ್ಷಣೆ ಮತ್ತು ನಿರ್ವಹಣೆ ಹಾಗೂ ಸ್ಥಳೀಯ ಹಸಿರು ಉದ್ಯೋಗಗಳ ಸೃಷ್ಟಿಗೂ ಆದ್ಯತೆ ನೀಡಲಾಗುತ್ತದೆ ಎಂದರು.
ಬೆಂಗಳೂರಿನ ನೀರಿನ ಬಿಕ್ಕಟ್ಟಿಗೆ ಹಸಿರೀಕರಣ ಪರಿಹಾರ
ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, 'ಹವಾಮಾನ ಬದಲಾವಣೆ, ಅಂತರ್ಜಲ ಮಟ್ಟ ಕುಸಿತ ಹಾಗೂ ಹೆಚ್ಚುತ್ತಿರುವ ಕಾಂಕ್ರೀಟೀಕರಣದಿಂದ ಬೆಂಗಳೂರಿನ ನೀರಿನ ಬಿಕ್ಕಟ್ಟು ಗಂಭೀರವಾಗುತ್ತಿದೆ' ಎಂದು ತಿಳಿಸಿದರು.
'ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಕೃತಿ ಆಧಾರಿತ ಪರಿಹಾರಗಳು ಹೆಚ್ಚು ಮಹತ್ವ ಪಡೆಯುತ್ತಿವೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸ್ಯವರ್ಗವನ್ನು ಪುನಃಸ್ಥಾಪಿಸುವುದು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹಾಗೂ ಮಳೆನೀರಿನ ಇಂಗುವಿಕೆಗೆ ನೆರವಾಗುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಯೋಜನೆಯ ಪ್ರಗತಿ ಮತ್ತು ಕೈಗೊಂಡ ಕಾರ್ಯಗಳ ಕುರಿತು ನಿಯಮಿತ ವರದಿಗಳನ್ನು ಪರಿಶೀಲಿಸಲಾಗುವುದು. ಯೋಜನೆ ಯಶಸ್ವಿಯಾದರೆ ರಾಜ್ಯದ ಇತರ ಅರಣ್ಯ ಪ್ರದೇಶಗಳಲ್ಲಿಯೂ ಇದೇ ಮಾದರಿಯನ್ನು ಅನುಷ್ಠಾನಗೊಳಿಸಲಾಗುವುದು' ಎಂದು ತಿಳಿಸಿದರು.
“ನೀರಿನ ಭದ್ರತೆ ಎಂದರೆ ಕೇವಲ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸುವುದಲ್ಲ. ಅರಣ್ಯಗಳ ಜಲಾನಯನ ಪ್ರದೇಶಗಳು ಮತ್ತು ಬೆಟ್ಟಗಳ ಮೇಲ್ಭಾಗದಲ್ಲಿರುವ ಜಲಮೂಲಗಳನ್ನು ರಕ್ಷಿಸುವುದರಿಂದಲೇ ಅದು ಆರಂಭವಾಗುತ್ತದೆ. ಬೆಂಗಳೂರಿನ ಕೆರೆಗಳು ಮತ್ತು ಬೋರ್‌ವೆಲ್‌ಗಳನ್ನು ಉಳಿಸಬೇಕಾದರೆ, ಅವುಗಳಿಗೆ ನೀರು ಪೂರೈಸುವ ಮೇಲ್ಭಾಗದ ಬೆಟ್ಟಗಳನ್ನು ಸಂರಕ್ಷಿಸಿ ಮತ್ತೆ ಹಸಿರಿನಿಂದ ತುಂಬಿಸಬೇಕು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಗಳನ್ನು ಹೊಂದಿರುವ ಕಂಪನಿಗಳು ಜಲಾನಯನ ಪ್ರದೇಶಗಳ ಪುನರುಜ್ಜೀವನಕ್ಕೆ ಹೂಡಿಕೆ ಮಾಡಬೇಕು,” ಎಂದು ರಾಮಲಿಂಗಾ ರೆಡ್ಡಿ ಕರೆ ನೀಡಿದರು.
ನಾಲ್ಕು ನದಿಗಳ ಉಗಮಕ್ಕೆ ನಂದಿಬೆಟ್ಟದ ಕೊಡುಗೆ
ನಂದಿಬೆಟ್ಟವನ್ನು ಈ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಆಯ್ಕೆ ಮಾಡಿರುವುದಕ್ಕೆ ಪ್ರಮುಖ ಕಾರಣವೆಂದರೆ ಅದು ಈ ಭಾಗದ ಪ್ರಮುಖ ಜಲಾನಯನ ಪ್ರದೇಶವಾಗಿರುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನಂದಿಬೆಟ್ಟದ ಇಳಿಜಾರುಗಳಿಂದ ಅರ್ಕಾವತಿ, ದಕ್ಷಿಣ ಪಿನಾಕಿನಿ, ಉತ್ತರ ಪಿನಾಕಿನಿ ಮತ್ತು ಪಾಲಾರ್ ನದಿಗಳು ಉಗಮಿಸುತ್ತವೆ. ಈ ಪ್ರದೇಶವು ಅಂತರ್ಜಲ ಮರುಪೂರಣಕ್ಕೆ ಹಾಗೂ ಬೆಂಗಳೂರು ಮಹಾನಗರ ಪ್ರದೇಶದ ಕೆರೆಗಳ ಸರಪಳಿಗೆ ನೀರು ಪೂರೈಕೆಯಾಗುವ ವ್ಯವಸ್ಥೆಗೆ ಸಹಕಾರಿಯಾಗಿದೆ. ಪ್ರತಿ ಬೇಸಿಗೆಯಲ್ಲೂ ಬೆಂಗಳೂರಿನಲ್ಲಿ ನೀರಿನ ಅಭಾವ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ನಂದಿಬೆಟ್ಟದ ಮೇಲ್ಭಾಗದ ಜಲಾನಯನ ಪ್ರದೇಶವನ್ನು ಪುನರುಜ್ಜೀವನಗೊಳಿಸುವುದು ನಗರದ ದೀರ್ಘಕಾಲೀನ ಜಲಭದ್ರತೆಗೆ ನೆರವಾಗಲಿದೆ ಎಂದರು.
ಯೋಜನೆಯ ಪ್ರಗತಿಯನ್ನು ಉಪಗ್ರಹಗಳ ಮೂಲಕ ಮೇಲ್ವಿಚಾರಣೆ, ಸ್ಥಳ ಪರಿಶೀಲನೆ, ಲೆಕ್ಕಪರಿಶೋಧನೆ ಹಾಗೂ ಜಲವೈಜ್ಞಾನಿಕ ಮೌಲ್ಯಮಾಪನದ ಮೂಲಕ ಪರಿಶೀಲಿಸಲಾಗುತ್ತದೆ. ಜತೆಗೆ, ಯೋಜನೆಯ ಪರಿಣಾಮಗಳನ್ನು ಸ್ವತಂತ್ರ ತೃತೀಯ ಸಂಸ್ಥೆಯ ಮೂಲಕವೂ ದೃಢೀಕರಿಸಲಾಗುತ್ತದೆ ಎಂದು ಅವರು ತಿಳಿಸಿದರು.