

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಪಾಯಕಾರಿ ಮಾಂಜಾ ದಾರದ ಹಾವಳಿ ಮುಂದುವರೆದಿದ್ದು, ಮಹಿಳೆ ಸಾವಿನ ಬೆನ್ನಲ್ಲೇ ಇದೀಗ ಮಾಂಜಾದಾರದಿಂದ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಮಾಂಜಾದಾರ ಆತಂಕ ಮೂಡಿಸಿದ್ದು, ಇತ್ತೀಚೆಗಷ್ಟೇ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆನ್ನಲ್ಲೇ, ಉಣಕಲ್‌ನಲ್ಲಿ ಮತ್ತೊಬ್ಬ ಯುವಕನ ಮುಖಕ್ಕೆ ದಾರ ಸಿಲುಕಿ ಗಂಭೀರ ಗಾಯಗಳಾಗಿವೆ.
ಬುಧವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಯುವಕನ ಮುಖಕ್ಕೆ ಮಾಂಜಾ ದಾರ ತಗುಲಿದ್ದರಿಂದ ಮೂಗು ಹಾಗೂ ಕಣ್ಣಿನ ಸುತ್ತಲಿನ ಭಾಗಕ್ಕೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಗಾಯಗೊಂಡ ಯುವಕನನ್ನು ತಕ್ಷಣವೇ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕೆಐಎಂಎಸ್) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಣ್ಣು ಮತ್ತು ಮೂಗಿನ ಭಾಗದಲ್ಲಾಗಿರುವ ಗಾಯಗಳಿಗೆ ಶಸ್ತ್ರಚಿಕಿತ್ಸೆ ನಡೆಸುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಮಾಂಜಾ ದಾರದ ಬಳಕೆಗೆ ಕಡಿವಾಣ ಯಾವಾಗ?
ಮಾಂಜಾ ದಾರದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಯುವಕ ಗಾಯಗೊಂಡಿರುವುದು ಅಪಾಯಕಾರಿ ದಾರದ ಬಳಕೆಯ ಕುರಿತು ಕಳವಳ ಹೆಚ್ಚಿಸಿದೆ. ಜನರ ಸಂಚಾರ ಹೆಚ್ಚಿರುವ ರಸ್ತೆಗಳಲ್ಲಿ ಇಂತಹ ದಾರಗಳು ಸಿಲುಕಿ ಗಂಭೀರ ಗಾಯಗಳು ಹಾಗೂ ಪ್ರಾಣಾಪಾಯಕ್ಕೆ ಕಾರಣವಾಗುತ್ತಿವೆ.
ಮಾಂಜಾ ದಾರದ ಬಳಕೆಯನ್ನು ತಡೆಯಲು ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ. ಇಂತಹ ಅವಘಡಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ಇತ್ತೀಚೆಗಷ್ಟೇ ಇದೇ ಹುಬ್ಬಳ್ಳಿಯಲ್ಲಿ ಮಾಂಜಾದಾರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಘಟನೆ ಹಸಿರಾಗಿರುವಂತೆಯೇ ಇದೀಗ ಮತ್ತದೇ ಹುಬ್ಬಳ್ಳಿ ನಗರದಲ್ಲಿ ಮಾಂಜಾದಾರಕ್ಕೆ ಸಿಲುಕಿ ವ್ಯಕ್ತಿಯೋರ್ವ ಗಂಭೀರಗಾಯಗೊಂಡಿದ್ದಾರೆ.