34 ವರ್ಷ ದಿನಗೂಲಿ ಟೈಪಿಸ್ಟ್ ಆಗಿ ಸೇವೆ ಸಲ್ಲಿಸಿದ್ದ SC ವರ್ಗದ ಮಹಿಳೆ: ಸೇವೆ ಖಾಯಂಗೆ ಹೈಕೋರ್ಟ್ ಆದೇಶ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮೂಲದ ಪರಿಶಿಷ್ಟ ಜಾತಿಗೆ ಸೇರಿದ ಗೀತಾ ರಾಮಪ್ಪ ತೇರದಾಳ ಅವರು 1988ರಲ್ಲಿ ಸೇವೆಗೆ ಸೇರಿದ್ದು, 2022ರಲ್ಲಿ ನಿವೃತ್ತರಾಗಿದ್ದರು. ಆದರೆ, ಅವರಿಗಿಂತ ನಂತರ ಸೇವೆಗೆ ಸೇರಿದ್ದ 12 ಮಂದಿ ನೌಕರರ ಸೇವೆಯನ್ನು ರಾಜ್ಯ ಸರ್ಕಾರ ಕಾಯಂಗೊಳಿಸಿತ್ತು.
High court
ಹೈಕೋರ್ಟ್
Updated on: 

ಬೆಂಗಳೂರು: ಪೌರಾಡಳಿತ ನಿರ್ದೇಶನಾಲಯದಲ್ಲಿ 34 ವರ್ಷಗಳ ಕಾಲ ದಿನಗೂಲಿ ಆಧಾರದಲ್ಲಿ ಬೆರಳಚ್ಚುಗಾರ್ತಿಯಾಗಿ(Typist) ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮಹಿಳೆಗೆ ಹೈಕೋರ್ಟ್ ಮಧ್ಯಪ್ರವೇಶದಿಂದ 64ನೇ ವಯಸ್ಸಿನಲ್ಲಿ ಸೇವೆ ಕಾಯಂಗೊಳಿಸಿಕೊಳ್ಳುವ ಹಾಗೂ ಅದರೊಂದಿಗೆ ಅದರ ಫಲವಾಗಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆಯುವ ಅವಕಾಶ ನೀಡಿ ಆದೇಶ ಹೊರಡಿಸಿದೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮೂಲದ ಪರಿಶಿಷ್ಟ ಜಾತಿಗೆ ಸೇರಿದ ಗೀತಾ ರಾಮಪ್ಪ ತೇರದಾಳ ಅವರು 1988ರಲ್ಲಿ ಸೇವೆಗೆ ಸೇರಿದ್ದು, 2022ರಲ್ಲಿ ನಿವೃತ್ತರಾಗಿದ್ದರು. ಆದರೆ, ಅವರಿಗಿಂತ ನಂತರ ಸೇವೆಗೆ ಸೇರಿದ್ದ 12 ಮಂದಿ ನೌಕರರ ಸೇವೆಯನ್ನು ರಾಜ್ಯ ಸರ್ಕಾರ ಕಾಯಂಗೊಳಿಸಿತ್ತು.

ತಾವು 2022ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಕಳೆದ ವರ್ಷ ಆಗಸ್ಟ್ 29ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಗೀತಾ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

High court
ಪೊಲೀಸ್ ನೋಟಿಸ್ ವಿರುದ್ಧ ನೇಹಾ ಬೋರಾ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ

ಗೀತಾ ಅವರು ಈಗಾಗಲೇ ನಿವೃತ್ತಿ ವಯಸ್ಸನ್ನು ತಲುಪಿರುವುದರಿಂದ ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಕೋರುವಂತಿಲ್ಲ ಎಂಬ ಕಾರಣ ನೀಡಿ ಏಕಸದಸ್ಯ ಪೀಠವು ಅವರ ಅರ್ಜಿಯನ್ನು ವಜಾಗೊಳಿಸಿತ್ತು.

ಆದರೆ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮತ್ತು ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಗೀತಾ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.

ಮೇಲ್ಮನವಿದಾರರು ನಿವೃತ್ತಿ ವಯಸ್ಸನ್ನು ತಲುಪುವ ಸಂದರ್ಭದಲ್ಲಿ ಯಾವ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ, ಅದೇ ವೃಂದದಲ್ಲಿ ಅವರ ಸೇವೆಯನ್ನು ಕಾಯಂಗೊಳಿಸಲು ಅರ್ಹರಾಗಿದ್ದಾರೆ. ಅವರು 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ 1998ರ ಫೆಬ್ರವರಿ 11ರಿಂದ ಪೂರ್ವಾನ್ವಯವಾಗುವಂತೆ ಅವರ ಸೇವೆಯನ್ನು ಕಾಯಂಗೊಳಿಸಬೇಕು. ಜೊತೆಗೆ, ಅದರಿಂದ ದೊರೆಯುವ ಎಲ್ಲ ಅನುಸಂಗಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

High court
ಕೋರ್ಟ್​ನಲ್ಲಿ ಸತತ ಮೂರು ಗಂಟೆಗಳ ಕಾಲ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿದ ಪ್ರದೋಷ್; ದರ್ಶನ್ ಬಗ್ಗೆ ಹೇಳಿದ್ದೇನು?

ಅನುಸಂಗಿಕ ಸೌಲಭ್ಯಗಳ ಕುರಿತು ಸ್ಪಷ್ಟನೆ ನೀಡಿರುವ ನ್ಯಾಯಾಲಯ, ವೇತನ ನಿಗದಿ ಹಾಗೂ ಇತರ ಎಲ್ಲ ಅರ್ಹ ಸೇವಾ ಸೌಲಭ್ಯಗಳ ಉದ್ದೇಶಕ್ಕಾಗಿ 10 ವರ್ಷಗಳ ಸೇವೆ ಪೂರ್ಣಗೊಂಡ ದಿನಾಂಕದಿಂದಲೇ ನಿಯಮಿತ ಸೇವೆಯ ನಿರಂತರತೆಯನ್ನು ಲೆಕ್ಕಾಚಾರದ ದೃಷ್ಟಿಯಿಂದ ಪರಿಗಣಿಸಬೇಕು ಎಂದು ತಿಳಿಸಿದೆ.

ಅಲ್ಲದೆ, ಮೇಲ್ಮನವಿದಾರರು ಸಲ್ಲಿಸಿರುವ ಸಂಪೂರ್ಣ 34 ವರ್ಷಗಳ ಸೇವಾವಧಿಯನ್ನು ಪಿಂಚಣಿ, ಗ್ರಾಚ್ಯುಟಿ (ಉಪದಾನ) ಹಾಗೂ ಇತರ ಎಲ್ಲ ಅರ್ಹ ನಿವೃತ್ತಿ ಮತ್ತು ಸೇವಾಂತ್ಯ ಸೌಲಭ್ಯಗಳನ್ನು ನಿರ್ಧರಿಸಲು ಹಾಗೂ ಲೆಕ್ಕಹಾಕಲು ಪರಿಗಣಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಈ ವೇಳೆ ರಾಜ್ಯ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದ ನ್ಯಾಯಾಲಯ, ಮಾದರಿ ಉದ್ಯೋಗದಾತನಾಗಿ ವರ್ತಿಸಬೇಕಿದ್ದ ರಾಜ್ಯ ಸರ್ಕಾರದ ನಡೆ, ನ್ಯಾಯಸಮ್ಮತತೆ ಮತ್ತು ಸ್ವೇಚ್ಛಾಚಾರರಹಿತ ಆಡಳಿತಕ್ಕೆ ಸಂಬಂಧಿಸಿದ ಸಾಂವಿಧಾನಿಕ ಮಾನದಂಡಗಳನ್ನು ಪಾಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com