ಸ್ಟಿಂಗ್ ಆಪರೇಷನ್: ಕಾಂಗ್ರೆಸ್ ಮೊದಲ ವಿಕೆಟ್ ಪತನ, ಕೃಪಾ ಆಳ್ವಾ ಪಕ್ಷದಿಂದ ಉಚ್ಛಾಟನೆ

ಕೃಪಾ ಆಳ್ವಾರನ್ನ ಕಾಂಗ್ರೆಸ್​​​ನಿಂದ ಉಚ್ಚಾಟನೆ ಮಾಡಲಾಗಿದೆ. ಸ್ಟಿಂಗ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದರಿಂದ 6 ವರ್ಷಗಳ ಕಾಲ ಕೃಪಾ ಆಳ್ವಾ ಅವರನ್ನ ಉಚ್ಚಾಟಿಸಲಾಗಿದೆ ಎಂದು ತಿಳಿದುಬಂದಿದೆ.
Krupa Alva
ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ
Updated on: 

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಮೊದಲ ವಿಕೆಟ್ ಪತನವಾಗಿದ್ದು, ಹಿರಿಯ ನಾಯಕ ಕೃಪಾ ಆಳ್ವ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿದ್ದು, ಕೃಪಾ ಆಳ್ವಾರನ್ನ ಕಾಂಗ್ರೆಸ್​​​ನಿಂದ ಉಚ್ಚಾಟನೆ ಮಾಡಲಾಗಿದೆ. ಸ್ಟಿಂಗ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದರಿಂದ 6 ವರ್ಷಗಳ ಕಾಲ ಕೃಪಾ ಆಳ್ವಾ ಅವರನ್ನ ಉಚ್ಚಾಟಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸ್ಟಿಂಗ್ ಆಪರೇಷನ್ ಹಿಂದೆ ಸ್ವಪಕ್ಷದವರ ಕೈವಾಡವಿದೆ ಎಂದು ಸ್ವತಃ ದೂರುದಾರ ಸಿದ್ದರಾಮಯ್ಯನವರ ಪುತ್ರ ಸಚಿವ ಯತೀಂದ್ರ ಅವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಲ್ಲದೇ ಸ್ವತಃ ಸಿದ್ದರಾಮಯ್ಯನವರೇ ಕೃಪಾ ಆಳ್ವಾ ಅವರ ಹೆಸರನ್ನು ಹೇಳಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಪ್ರಕರಣ ಸಂಬಂಧ ಮಹತ್ವದ ಚರ್ಚೆ ಮಾಡಿದ್ದರು.

ಇದಾದ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸೂಚನೆ ಮೇರೆಗೆ ಕೃಪಾ ಆಳ್ವಾರನ್ನು ಅಮಾನತು ಮಾಡಲಾಗಿದೆ.

Krupa Alva
ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಷಡ್ಯಂತ್ರದಲ್ಲಿ ಕಾಂಗ್ರೆಸ್‌ ನಾಯಕಿ ಕೃಪಾ ಆಳ್ವಾ ಭಾಗಿ: ಕುಮಾರಸ್ವಾಮಿ

ಉಚ್ಛಾಟನೆ ಆದೇಶದಲ್ಲೇನಿದೆ?

ಸ್ಟಿಂಗ್ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಕಾರಣ ಪ್ರಕರಣದಲ್ಲಿ ನಿಮ್ಮ ನಡವಳಿಕೆ ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂಬ ಪ್ರಕರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಿದೆ.

ಈ ಘಟನೆಯಲ್ಲಿ ತಾವು ಭಾಗಿಯಾಗಿದ್ದಾರೆಂಬ ಆರೋಪವಿದೆ. ಈ ಹಿನ್ನೆಲೆ ಕಾರಣ ಕೇಳಿ ಕೆಪಿಸಿಸಿಯಿಂದ ನೋಟೀಸ್ ನೀಡಲಾಗಿತ್ತು. ಆದ್ರೆ,ತಾವು ಇದುವರೆಗೂ ನೋಟಿಸ್​ಗೆ ಉತ್ತರಿಸಿಲ್ಲ. ಹೀಗಾಗಿ ತಮ್ಮನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಆದೇಶ ಉಲ್ಲೇಖಿಸಲಾಗಿದೆ.

ಸಿದ್ದರಾಮಯ್ಯಗೆ ಕ್ಲೀನ್ ಚಿಟ್

ಇನ್ನು ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಇದೊಂದು ಕಟ್ಟು ಕಥೆ ಎಂದು ಸಿಸಿಬಿ ಮಾಧ್ಯಮ ಪ್ರಕಟಣೆ ಮೂಲಕ ಅಧಿಕೃತವಾಗಿ ತಿಳಿಸಿದೆ. ಸ್ಟಿಂಗ್ ತಂಡ ಬ್ಲ್ಯಾಕ್​​​​ ಮೇಲ್ ಏನಾದ್ರೂ ಮಾಡಿದ್ಯಾ ಎನ್ನುವ ಅನುಮಾನುಗಳು ವ್ಯಕ್ತವಾಗಿದ್ದು, ಇದರಿಂದ ದೂರುದಾರ ಸಿದ್ದರಾಮಯ್ಯನವರ ಹೇಳಿಕೆ ಪಡೆಯಲು ಪೊಲೀಸ್ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Krupa Alva
ಸ್ಟಿಂಗ್ ಕಾರ್ಯಾಚರಣೆ ತನಿಖೆಯಲ್ಲಿ ಬಿಗ್ ಟ್ವಿಸ್ಟ್: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮನೆಯಲ್ಲಿ ಸಿಸಿಬಿ ಅಧಿಕಾರಿಗಳಿಂದ ಮಹಜರು!

ವಿಚಾರಣೆಗೆ ಹಾಜರಾದ ಬಳಿಕ ವಿದೇಶಕ್ಕೆ ಪರಾರಿ?

ಇನ್ನು ದೂರುದಾರ ಸಿದ್ದರಾಮಯ್ಯನವರು ಕೃಪಾ ಆಳ್ವಾ ಹೆಸರು ಬಹಿರಂಗವಾಗಿ ಹೇಳಿದ್ದು, ಇದರ ಬೆನ್ನಲ್ಲೇ ಕೃಪಾ ಆಳ್ವಾ ಅಕ್ಟೋಬರ್ 24ರಂದು ಬೆಂಗಳೂರಿನ ಕೇಂದ್ರ ಸೈಬರ್ ಅಪರಾಧ ವಿಭಾಗದ ಪೊಲೀಸರ ಎದುರು ಅವರು ವಿಚಾರಣೆ ಹಾಜರಾಗಿದ್ದರು. ಆದರೆ, ಇದೀಗ ಅವರು ವಿದೇಶಕ್ಕೆ ಹಾರಿದ್ದಾರೆ ಎಂದು ಹೇಳಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಟ್ಟಿದೆ.

ಯಾರಿದು ಕೃಪಾ ಆಳ್ವಾ?

ಕೃಪಾ ಆಳ್ವಾ ಅವರು ಕರ್ನಾಟಕ ಕಾಂಗ್ರೆಸ್‌ನ ಪ್ರಮುಖ ಮಹಿಳಾ ಮುಖಂಡರಾಗಿದ್ದು, ದಶಕಕ್ಕೂ ಹೆಚ್ಚು ಕಾಲದಿಂದ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಮೂಲತಃ ಕರಾವಳಿ ಭಾಗದವರಾದ ಇವರು, 1992ರಲ್ಲಿ ಹತ್ಯೆಗೀಡಾದ ಮಂಗಳೂರಿನ ಪ್ರಭಾವಿ ಸಮಾಜ ಸೇವಕ ಹಾಗೂ ನಾಯಕ ಅಮರ್ ಆಳ್ವಾ ಅವರ ಪತ್ನಿ.

ಪತಿಯ ನಿಧನದ ಬಳಿಕ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನಂತರ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ, ವಕ್ತಾರೆ ಹಾಗೂ ರಾಜ್ಯ ಪ್ರಚಾರ ಸಮಿತಿಯ ಸಂಯೋಜಕರಾಗಿದ್ದರು. ಇನ್ನು 2015ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X