ರೈತರ ಸಾಲ ಮನ್ನಾಗೆ ಕೇಂದ್ರದ ನೆರವು ಕೇಳಿದ CM ಡಿಕೆ ಶಿವಕುಮಾರ್: ವಿಜಯೇಂದ್ರ, ಅಶೋಕ್‌ಗೂ ದೆಹಲಿಗೆ ಬರುವಂತೆ ಆಹ್ವಾನ

ನೀವು ಬಿಜೆಪಿ ಮತ್ತು ಜೆಡಿಎಸ್‌ನ ರಾಜಕೀಯವನ್ನು ನೋಡಿದ್ದೀರಿ. ಇತ್ತೀಚಿನ ಅಧಿವೇಶನದಲ್ಲಿ ರೈತರ ಬಗ್ಗೆ ಅಥವಾ ಬರ ಪರಿಸ್ಥಿತಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ..
CM D K Shivakumar
ಸಿಎಂ ಡಿಕೆ ಶಿವಕುಮಾರ್ ವೈಮಾನಿಕ ಸಮೀಕ್ಷೆ
Updated on

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಬಾಗಲಕೋಟೆ ಮತ್ತು ವಿಜಯನಗರ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಸಾಲಮನ್ನಾ ವಿಚಾರವಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಬಿಜೆಪಿ ನಾಯಕರೂ ತಮ್ಮೊಂದಿಗೆ ದೆಹಲಿಗೆ ಬರಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ರೈತರ ಸಮಸ್ಯೆ ಹಾಗೂ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆದಿಲ್ಲ ಎಂದು ಹೇಳಿದರು.

“ನೀವು ಬಿಜೆಪಿ ಮತ್ತು ಜೆಡಿಎಸ್‌ನ ರಾಜಕೀಯವನ್ನು ನೋಡಿದ್ದೀರಿ. ಇತ್ತೀಚಿನ ಅಧಿವೇಶನದಲ್ಲಿ ರೈತರ ಬಗ್ಗೆ ಅಥವಾ ಬರ ಪರಿಸ್ಥಿತಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ” ಎಂದು ಅವರು ಹೇಳಿದರು.

ಬರ ಪರಿಸ್ಥಿತಿ ಕುರಿತು ಚರ್ಚಿಸಲು ಅವಕಾಶ ಸಿಗದಿರುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆಡಳಿತಾರೂಢ ಕಾಂಗ್ರೆಸ್ ಶಾಸಕರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಶಿವಕುಮಾರ್ ತಿಳಿಸಿದರು.

“ನಾನು ಅವರಿಗೆ ಸಹಾಯ ಮಾಡಲು ಬಯಸುತ್ತೇನೆ. ಕೇಂದ್ರ ಸರ್ಕಾರವೂ ಹಣಕಾಸಿನ ನೆರವು ನೀಡಬೇಕು. ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಅಗತ್ಯವಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ” ಎಂದರು.

CM D K Shivakumar
ಯೂ-ಟರ್ನ್ ಅಲ್ಲ, ವಿಧಾನಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಪಾರ್ಕ್ ಬಿಲ್ ಹಿಂಪಡೆತ, ಬಿಜೆಪಿಯವರು ಅಭಿವೃದ್ಧಿ ವಿರೋಧಿಗಳು: CM ಡಿ ಕೆ ಶಿವಕುಮಾರ್; Video

ಕೇಂದ್ರ ಹೊಣೆ ಹೊರಬೇಕು

ರೈತರ ಸಾಲ ಮನ್ನಾದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಬೇಕು. “ಪ್ರಧಾನಿ ಅವರೇ ಇದು ಬರ ಪರಿಸ್ಥಿತಿ ಎಂದು ಹೇಳಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವೇ ಸಾಲ ಮನ್ನಾದ ಹೊಣೆ ಹೊತ್ತುಕೊಳ್ಳಬೇಕು,” ಎಂದು ಮುಖ್ಯಮಂತ್ರಿ ಹೇಳಿದರು.

ಈ ವಿಚಾರವಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಮ್ಮೊಂದಿಗೆ ದೆಹಲಿಗೆ ಬರಬೇಕು ಎಂದು ಶಿವಕುಮಾರ್ ಕರೆ ನೀಡಿದರು.

ಪಾರ್ಕ್ ಬಿಲ್ ಗೆ ಸಮರ್ಥನೆ

ಇದೇ ವೇಳೆ, ಉದ್ಯಾನವನ ಮತ್ತು ಪಾರ್ಕ್‌ಗಳ ಭೂಮಿಯ ಶೇ.5ರಷ್ಟನ್ನು ಸಾರ್ವಜನಿಕ ಮೂಲಸೌಕರ್ಯ ಹಾಗೂ ಉಪಯುಕ್ತತಾ ಯೋಜನೆಗಳಿಗೆ ಬಳಸಲು ಅವಕಾಶ ನೀಡುವ ವಿವಾದಿತ ಪಾರ್ಕ್ಸ್‌ ಬಿಲ್‌ ಹಿಂಪಡೆದಿರುವ ಸರ್ಕಾರದ ನಿರ್ಧಾರವನ್ನು ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಬಿಲ್‌ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಿ, ಅದರ ಉದ್ದೇಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿಯೇ ಅದನ್ನು ಹಿಂಪಡೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಲ್‌ ಹಿಂಪಡೆದಿರುವುದನ್ನು ಬಿಜೆಪಿ ತನ್ನ ಗೆಲುವು ಎಂದು ಬಿಂಬಿಸುತ್ತಿರುವುದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಅವರು, ಬಿಜೆಪಿಯನ್ನು ‘ಅಭಿವೃದ್ಧಿ ವಿರೋಧಿ ಪಕ್ಷ’ ಎಂದು ಟೀಕಿಸಿದರು. ಬೆಂಗಳೂರಿಗೆ ಎದುರಾಗಿರುವ ಯಾವುದೇ ‘ಶಾಪ’ಕ್ಕೂ ಬಿಜೆಪಿಯೇ ಕಾರಣ ಎಂದು ವಾಗ್ದಾಳಿ ನಡೆಸಿದರು.

ಅಂದಹಾಗೆ ಬರ ಪರಿಸ್ಥಿತಿ, ಅದರಿಂದ ಉಂಟಾಗಿರುವ ಕೃಷಿ ಬಿಕ್ಕಟ್ಟು ಹಾಗೂ ಪ್ರಸ್ತಾವಿತ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲು ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಸೆಪ್ಟೆಂಬರ್ 21ರಿಂದ 23ರವರೆಗೆ ಕರೆಯಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com