SIR ಗೊಂದಲ: ನೋಟಿಸ್ ಕೊಡುವ ಮುನ್ನ ರೀ-ಚೆಕ್ ಮಾಡಲು ಅಧಿಕಾರಿಗಳು ಮುಂದು..!

ನೋಟಿಸ್‌ಗಳು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗಿರುವುದು ಜನರಲ್ಲಿ ಗೊಂದಲ ಮತ್ತು ಆತಂಕವನ್ನು ಹೆಚ್ಚಿಸಿದೆ.
Representational image
ಸಂಗ್ರಹ ಚಿತ್ರ
Updated on

ಬೆಂಗಳೂರು: ಎಸ್‌ಐಆರ್‌ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯ ಎರಡನೇ ಹಂತದಲ್ಲಿ ನಾಗರಿಕರಿಗೆ ನೀಡಲಾಗುವ ನೋಟಿಸ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯ ಅಧಿಕಾರಿಗಳು ಗಣತಿ ನಮೂನೆಗಳನ್ನು ಮತ್ತೊಮ್ಮೆ ಪರಿಶೀಲಿಸಲು ಮುಂದಾಗಿದ್ದಾರೆ.

ರಾಜ್ಯದಲ್ಲಿ 43,81,335 ಮತದಾರರನ್ನು ಅಸಂಗತಿ/ತಾರ್ಕಿಕ ವ್ಯತ್ಯಾಸ (Anomaly/Logical Discrepancy) ವಿಭಾಗದಲ್ಲಿ ಹಾಗೂ 23,45,500 ಮತದಾರರನ್ನು ಯಾವುದೇ ಹೊಂದಾಣಿಕೆ ಇಲ್ಲದ (No Mapping) ವಿಭಾಗದಲ್ಲಿ ಗುರುತಿಸಲಾಗಿದೆ.

ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಈ ಮತದಾರರಿಗೆ ನೋಟಿಸ್‌ ನೀಡಿ, ಅಗತ್ಯ ದಾಖಲೆಗಳೊಂದಿಗೆ ಚುನಾವಣಾ ನೋಂದಣಿ ಅಧಿಕಾರಿ (ERO) ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗುತ್ತಿದೆ.

ನೋಟಿಸ್‌ಗಳು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗಿರುವುದು ಜನರಲ್ಲಿ ಗೊಂದಲ ಮತ್ತು ಆತಂಕವನ್ನು ಹೆಚ್ಚಿಸಿದೆ.

ಹೀಗಾಗಿ ಜನರ ಆತಂಕವನ್ನು ಕಡಿಮೆ ಮಾಡಲು ಗಣತಿ ನಮೂನೆಗಳ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸುತ್ತಿದ್ದೇವೆ. ಐದಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳಲ್ಲಿ ಕೆಲ ಮಕ್ಕಳ ಮಾಹಿತಿಯನ್ನು ತಾಯಿಯೊಂದಿಗೆ ಹಾಗೂ ಉಳಿದ ಮಕ್ಕಳ ಮಾಹಿತಿಯನ್ನು ತಂದೆಯೊಂದಿಗೆ ಹೊಂದಾಣಿಕೆ ಮಾಡಲಾಗಿದೆ.

Representational image
Watch | SIR ಅವಾಂತರ: ಜೀವಂತ ವ್ಯಕ್ತಿ 'ಸಾವು'; ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಸರತ್ತು!

ಅವಳಿ ಮಕ್ಕಳ ವಿಚಾರದಲ್ಲಿ ವಯಸ್ಸಿನ ಅಂತರ ಇಲ್ಲದ ಕಾರಣ, ಮಕ್ಕಳನ್ನು ಬೇರೆ ಬೇರೆ ಪೋಷಕರೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ ಅಥವಾ ಜನನ ಪ್ರಮಾಣಪತ್ರಗಳನ್ನು ನೀಡುವಂತೆ ಕೇಳಲಾಗುತ್ತಿದೆ. ಪ್ರತಿಯೊಂದು ಪ್ರಕರಣವನ್ನೂ ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ 45,000ಕ್ಕೂ ಹೆಚ್ಚು ತೃತೀಯಲಿಂಗಿಗಳಿದ್ದರೂ, ಸುಮಾರು 4,500 ಮಂದಿ ಮಾತ್ರ ಚುನಾವಣಾ ಆಯೋಗಕ್ಕೆ ತಮ್ಮ ವಿವರಗಳನ್ನು ಸಲ್ಲಿಸಿದ್ದಾರೆ.

ತೃತೀಯಲಿಂಗಿಗಳನ್ನು ತಾರ್ಕಿಕ ವ್ಯತ್ಯಾಸದ ವಿಭಾಗದಲ್ಲಿ ಸೇರಿಸಿರುವ ಕುರಿತು ಪ್ರಶ್ನಿಸಿದಾಗ, “2003ರ ಎಸ್‌ಐಆರ್‌ ವೇಳೆ ವ್ಯಕ್ತಿಯ ಲಿಂಗ ಪುರುಷ ಎಂದು ದಾಖಲಾಗಿದ್ದು, ಇದೀಗ ಲಿಂಗ ಬದಲಾವಣೆಯಾಗಿರುವ ಪ್ರಕರಣಗಳಿವೆ. ಇಂತಹವರು ವೈದ್ಯಕೀಯ ಅಥವಾ ವೈದ್ಯರ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇನ್ನು ಹಲವು ಪ್ರಕರಣಗಳಲ್ಲಿ ಬೂತ್‌ ಮಟ್ಟದ ಅಧಿಕಾರಿಗಳನ್ನು (BLO) ತರಾಟೆಗೆ ತೆಗೆದುಕೊಂಡು, ಚುನಾವಣಾ ನೋಂದಣಿ ಅಧಿಕಾರಿಗೆ ಅಗತ್ಯ ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಒಂದೇ ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ ವಾಸಿಸುವ ಒಂದೇ ಕುಟುಂಬದ ಮಕ್ಕಳನ್ನು ಮತ್ತೊಂದು ಕುಟುಂಬದೊಂದಿಗೆ ತಪ್ಪಾಗಿ ಹೊಂದಾಣಿಕೆ ಮಾಡಿರುವ ಪ್ರಕರಣಗಳೂ ಪತ್ತೆಯಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕೆಲವು ಪ್ರಕರಣಗಳಲ್ಲಿ ಮತದಾರರ ವಯಸ್ಸು ಹಾಗೂ ಅವರ ಪೋಷಕರ ವಯಸ್ಸನ್ನು ಬಿಎಲ್‌ಒಗಳು ತಪ್ಪಾಗಿ ದಾಖಲಿಸಿರುವುದು ಕಂಡುಬಂದಿದೆ. ಇಂತಹ ಮತದಾರರ ಹೆಸರುಗಳು ತಾರ್ಕಿಕ ವ್ಯತ್ಯಾಸದ ಪಟ್ಟಿಯಲ್ಲಿ ಸೇರಿದ್ದರೂ, ತಪ್ಪುಗಳನ್ನು ಸರಿಪಡಿಸಲು ಬಿಎಲ್‌ಒಗಳಿಗೆ ಸಂಬಂಧಿತ ವಿವರಗಳನ್ನು ಇಆರ್‌ಒಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಅಸಂಗತಿ ಅಥವಾ ಯಾವುದೇ ಹೊಂದಾಣಿಕೆ ಇಲ್ಲದ ವಿಭಾಗದಲ್ಲಿ ಹೆಸರು ಇದ್ದರೂ ನೋಟಿಸ್‌ ಬಂದಿಲ್ಲ ಎಂದು ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ಬಿಎಲ್‌ಒ ಮತ್ತು ಇಆರ್‌ಒಗಳು ಮತ್ತೆ ಹಿಂಬದಿಯ ಹಂತದಲ್ಲಿ ಅಗತ್ಯ ಪರಿಶೀಲನೆ ಮತ್ತು ತಿದ್ದುಪಡಿ ಕಾರ್ಯ ನಡೆಸಿರುವುದರಿಂದ ಕೆಲವರಿಗೆ ನೋಟಿಸ್‌ ನೀಡುವ ಅಗತ್ಯವಿಲ್ಲದಿರಬಹುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com