

ಬೆಂಗಳೂರು: ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿರುವ ಕರ್ನಾಟಕದ ನಿವಾಸಿಗಳ ಗುರುತು ಪತ್ತೆ ಹಚ್ಚಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ನಾಪತ್ತೆಯಾದವರ ಹತ್ತಿರದ ಸಂಬಂಧಿಕರ ಡಿಎನ್‌ಎ (DNA) ಮಾದರಿ ಸಂಗ್ರಹಣೆ ಮತ್ತು ಪರಿಶೀಲನೆಗಾಗಿ ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ಅಧಿಕೃತ ‘ನೋಡಲ್ ಕೇಂದ್ರ’ವನ್ನಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಘೋಷಿಸಿದೆ.
ನೇಪಾಳದಲ್ಲಿ ಪತ್ತೆಯಾಗಿರುವ ಮೃತದೇಹಗಳನ್ನು ಗುರುತಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸುವಂತೆ ನೇಪಾಳ ಸರ್ಕಾರ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಗುರುತಿಸಲಾಗದ ಮೃತದೇಹಗಳ ಡಿಎನ್‌ಎ ಪ್ರೊಫೈಲ್‌ಗಳನ್ನು ನೇಪಾಳದಲ್ಲಿ ಸಿದ್ಧಪಡಿಸಲಾಗುತ್ತಿದ್ದು, ಅದನ್ನು ಪರಿಶೀಲಿಸಲು ಸಂತ್ರಸ್ತರ ರಕ್ತ ಸಂಬಂಧಿಕರ ಡಿಎನ್‌ಎ ಮಾದರಿಗಳ ಅಗತ್ಯವಿದೆ.
ನಾಪತ್ತೆಯಾಗಿರುವವರ ಮೊದಲ ಹಂತದ ಸಂಬಂಧಿಕರಾದ ತಂದೆ, ತಾಯಿ, ಮಗ, ಮಗಳು ಅಥವಾ ಪತಿ/ಪತ್ನಿ ಅವರು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಆಧಾರ್ ಕಾರ್ಡ್‌ನಂತಹ ಸರ್ಕಾರ ನೀಡಿರುವ ಗುರುತಿನ ಚೀಟಿ ಹಾಗೂ ಸಂಬಂಧವನ್ನು ಸಾಬೀತುಪಡಿಸುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಸಂಬಂಧದ ಪರಿಶೀಲನೆ ಪೂರ್ಣಗೊಂಡ ಬಳಿಕ ಡಿಎನ್‌ಎ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗುತ್ತದೆ. ಅಲ್ಲಿಂದ ಡಿಎನ್‌ಎ ಪ್ರೊಫೈಲ್‌ಗಳನ್ನು ನೇಪಾಳದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಈ ಮೂಲಕ ಗುರುತಿಸಲಾಗದ ಮೃತದೇಹಗಳ ಪೈಕಿ ಕರ್ನಾಟಕದ ಸಂತ್ರಸ್ತರನ್ನು ಪತ್ತೆಹಚ್ಚಿ ಅವರ ಕುಟುಂಬಗಳಿಗೆ ಹಸ್ತಾಂತರಿಸಲು ನೆರವಾಗಲಿದೆ.