ಬೆಂಗಳೂರಿನಾಚೆಗೂ ಅಭಿವೃದ್ಧಿ ವಿಸ್ತರಣೆ: ಮೈಸೂರು, ಮಂಗಳೂರು, ಬೆಳಗಾವಿ ಸೇರಿ ಇತರೆ ನಗರಗಳತ್ತ ಸರ್ಕಾರದ ಗಮನ, ಮೂಲಸೌಕರ್ಯ ಬಲಪಡಿಸಲು ಹೆಚ್ಚಿನ ಒತ್ತು..!

ವೇಗವಾಗಿ ನಡೆಯುತ್ತಿರುವ ನಗರೀಕರಣವು ಹೊಸ ಅವಕಾಶಗಳ ಜತೆಗೆ ಮಹತ್ವದ ಜವಾಬ್ದಾರಿಗಳನ್ನೂ ತಂದಿದೆ. ನಗರಗಳ ಬೆಳವಣಿಗೆ ಕೇವಲ ಭೌತಿಕ ವಿಸ್ತರಣೆಗೆ ಸೀಮಿತವಾಗದೆ, ಸಮಗ್ರ ಹಾಗೂ ಸುಸ್ಥಿರ ರೀತಿಯಲ್ಲಿ ಯೋಜಿತವಾಗಬೇಕು.
Yathindra Siddaramaiah
ಯತೀಂದ್ರ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ದೇಶದಲ್ಲೇ ಅತ್ಯಂತ ವೇಗವಾಗಿ ನಗರೀಕರಣಗೊಳ್ಳುತ್ತಿರುವ ಹಾಗೂ ಆರ್ಥಿಕವಾಗಿ ಚುರುಕಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ನಗರಗಳು ಕೈಗಾರಿಕೆ, ನವೋದ್ಯಮ, ಶಿಕ್ಷಣ, ಉದ್ಯೋಗ ಹಾಗೂ ಹೂಡಿಕೆಯ ಪ್ರಮುಖ ಕೇಂದ್ರಗಳಾಗಿ ವೇಗವಾಗಿ ಹೊರಹೊಮ್ಮುತ್ತಿವೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬುಧವಾರ ಹೇಳಿದರು.

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಹೂಡಿಕೆ ಶೃಂಗಸಭೆಯನ್ನು ಬುಧವಾರ ಉದ್ಘಾಟಿಸಿ, ಯತೀಂದ್ರ ಅವರು ಮಾತನಾಡಿದರು.

ಬೆಂಗಳೂರು ಜಾಗತಿಕ ತಂತ್ರಜ್ಞಾನ ಮತ್ತು ನವೋದ್ಯಮದ ಕೇಂದ್ರವಾಗಿ ಈಗಾಗಲೇ ತನ್ನದೇ ಆದ ಸ್ಥಾನವನ್ನು ಸ್ಥಾಪಿಸಿಕೊಂಡಿದೆ. ಇದರೊಂದಿಗೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಶಿವಮೊಗ್ಗ ಹಾಗೂ ತುಮಕೂರು ನಗರಗಳೂ ಪ್ರಾದೇಶಿಕ ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರಗಳಾಗಿ ರೂಪುಗೊಳ್ಳುತ್ತಿವೆ ಎಂದು ಹೇಳಿದರು.

ವೇಗವಾಗಿ ನಡೆಯುತ್ತಿರುವ ನಗರೀಕರಣವು ಹೊಸ ಅವಕಾಶಗಳ ಜತೆಗೆ ಮಹತ್ವದ ಜವಾಬ್ದಾರಿಗಳನ್ನೂ ತಂದಿದೆ. ನಗರಗಳ ಬೆಳವಣಿಗೆ ಕೇವಲ ಭೌತಿಕ ವಿಸ್ತರಣೆಗೆ ಸೀಮಿತವಾಗದೆ, ಸಮಗ್ರ ಹಾಗೂ ಸುಸ್ಥಿರ ರೀತಿಯಲ್ಲಿ ಯೋಜಿತವಾಗಬೇಕು. ಪ್ರತಿಯೊಬ್ಬ ನಾಗರಿಕನ ಜೀವನಮಟ್ಟ ಸುಧಾರಿಸುವುದು ಸರ್ಕಾರದ ನಗರಾಭಿವೃದ್ಧಿ ಕಾರ್ಯಸೂಚಿಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

Yathindra Siddaramaiah
ಕೂತು-ಕೂತು ಸೋಮಾರಿಗಳಾಗಿದ್ರು, ಪಾದಯಾತ್ರೆ ಮಾಡಿ ಕ್ರಿಯಾಶೀಲರಾಗಲಿ; ಸಮಾವೇಶಕ್ಕೆ ಕರೆಯೋದು ಆಯೋಜಕರಿಗೆ ಬಿಟ್ಟದ್ದು: ಯತೀಂದ್ರ; Video

ನಗರಾಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ನಾಲ್ಕು ಪ್ರಮುಖ ಅಂಶಗಳಿಗೆ ಆದ್ಯತೆ ನೀಡುತ್ತಿದೆ. ಬಲಿಷ್ಠ ನಗರ ಆಡಳಿತ ಮತ್ತು ಸಮಗ್ರ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಪರಿಣಾಮಕಾರಿ ಹಣಕಾಸು ವ್ಯವಸ್ಥೆ, ಸುರಕ್ಷಿತ ಹಾಗೂ ವಿಶ್ವಾಸಾರ್ಹ 24 ಗಂಟೆಗಳ ಕುಡಿಯುವ ನೀರು ಮತ್ತು ಒಳಚರಂಡಿ ಸೌಲಭ್ಯ ಹಾಗೂ ಸುಸ್ಥಿರ, ಸಮಗ್ರ ಮತ್ತು ಜನಕೇಂದ್ರಿತ ನಗರ ಸಾರಿಗೆ ವ್ಯವಸ್ಥೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ 24 ಗಂಟೆಗಳ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ವಿಸ್ತರಿಸುವುದು, ವಿವಿಧ ನಗರಗಳಲ್ಲಿ ನೀರು ಮತ್ತು ಒಳಚರಂಡಿ ಮೂಲಸೌಕರ್ಯವನ್ನು ಬಲಪಡಿಸುವುದು ಹಾಗೂ ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಮರುಬಳಕೆಯನ್ನು ಉತ್ತೇಜಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಹೇಳಿದರು.

ನಗರಗಳ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಜಲ ಸಂಪನ್ಮೂಲಗಳ ಪರಿಣಾಮಕಾರಿ ನಿರ್ವಹಣೆ ಹಾಗೂ ಸುಸ್ಥಿರ ನಗರ ಸೇವೆಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಯತೀಂದ್ರ ಹೇಳಿದರು.

ನಗರಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಸಮಸ್ಯೆ ಪರಿಹರಿಸಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು, ಉಪನಗರ ರೈಲು ಸೇವೆ, ಸಾರಿಗೆ ಆಧಾರಿತ ನಗರಾಭಿವೃದ್ಧಿ, ಪಾದಚಾರಿ ಮತ್ತು ಸೈಕಲ್‌ ಸವಾರರಿಗೆ ಅಗತ್ಯ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಆಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com