

ಬೆಂಗಳೂರು: ಮದುವೆಯಾಗಿ ಕೇವಲ 10 ತಿಂಗಳಿಗೇ 5 ತಿಂಗಳ ಗರ್ಭಿಣಿ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ರಾಮನಗರದಲ್ಲಿ ನಡೆದಿದೆ.
ಐದು ತಿಂಗಳ ಗರ್ಭಿಣಿಯಾಗಿದ್ದ 19 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ಕೆಂಪಯ್ಯನದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಮುನಿಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಅವರು 10 ತಿಂಗಳ ಹಿಂದೆ ಶಂಕರಯ್ಯ ಎಂಬುವವರನ್ನು ವಿವಾಹವಾಗಿದ್ದರು. ಮುನಿಲಕ್ಷ್ಮಿ ಅವರ ತಾಯಿ ಬೈರಮ್ಮ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶಂಕರಯ್ಯ, ಅವರ ತಾಯಿ ಭಾಗ್ಯಮ್ಮ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ, ತನ್ನ ಮಗಳಿಗೆ ಆಕೆಯ ಪತಿ ಹಾಗೂ ಅತ್ತೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಬೈರಮ್ಮ ಆರೋಪಿಸಿದ್ದಾರೆ. ಟ್ರ್ಯಾಕ್ಟರ್ ಸಾಲ ತೀರಿಸಲು 1 ಲಕ್ಷ ಹಣ ತರುವಂತೆ ಶಂಕರಯ್ಯ ಹಾಗೂ ಭಾಗ್ಯಮ್ಮ ಒತ್ತಡ ಹೇರಿದ್ದರು. ಹಣ ನೀಡದಿದ್ದಕ್ಕಾಗಿ ಮುನಿಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಗಳಿಗಾಗಿ ಆಕೆಯ ಪೋಷಕರು 50 ಸಾವಿರ ರೂ ಸಾಲ ಮಾಡಿ ನೀಡಿದ್ದರು. ಬಳಿಕ ಉಳಿದ ಹಣ ಹೊಂದಿಸಲು ಜಾನುವಾರುಗಳನ್ನು ಮಾರಿ ಒಟ್ಟು 1 ಲಕ್ಷ ರೂ ನೀಡಿದ್ದರು ಎನ್ನಲಾಗಿದೆ. ಆದರೆ, ಸೋಮವಾರ ಮುನಿಲಕ್ಷ್ಮಿ ಅವರು ಪತಿಯ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ವರದಕ್ಷಿಣೆ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.