ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಎಲ್ಲಾ ಚಟುವಟಿಕೆಗಳು ರಾಜ್ಯದಲ್ಲೇ ನಡೆಯಬೇಕು: ಎಂ ಬಿ ಪಾಟೀಲ್

ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿರುವ `ಕರ್ನಾಟಕ ವಿದ್ಯುನ್ಮಾನ ನಾಯಕತ್ವ ಸಮಾವೇಶ’ದಲ್ಲಿ ಮಾತನಾಡಿದರು.
MB Patil
ಎಂ ಬಿ ಪಾಟೀಲ್
Updated on

ಬೆಂಗಳೂರು: ರಾಜ್ಯವು ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬಹುಮುಖ್ಯ ತಾಣವಾಗಬೇಕು. ಇದಕ್ಕಾಗಿ ನಮ್ಮಲ್ಲೇ ವಿನ್ಯಾಸ, ಉತ್ಪಾದನೆ, ಪರೀಕ್ಷೆ ಮತ್ತು ರಫ್ತು ವಹಿವಾಟು ಸೇರಿದಂತೆ ಪ್ರತಿಯೊಂದು ಚಟುವಟಿಕೆಯೂ ನಡೆಯುವಂತೆ ಆಗಬೇಕು ಎನ್ನುವುದೇ ನಮ್ಮ ಗುರಿಯಾಗಿದೆ. ಸರಕಾರವು ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನೂ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಹೇಳಿದ್ದಾರೆ.

ಅವರು ಇಲ್ಲಿನ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿರುವ `ಕರ್ನಾಟಕ ವಿದ್ಯುನ್ಮಾನ ನಾಯಕತ್ವ ಸಮಾವೇಶ’ದಲ್ಲಿ ಮಾತನಾಡಿದರು. ಎಲೆಕ್ಟ್ರಾನಿಕ್ಸ್ ಕ್ಷೇತ್ರವು ನಮ್ಮ ಬದುಕಿನ ಪ್ರತಿಯೊಂದು ಅಂಶವನ್ನೂ ಆವರಿಸಿಕೊಂಡಿದೆ. ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಚಿಪ್ ವಿನ್ಯಾಸಕಾರರು ಮತ್ತು 10 ಸಾವಿರಕ್ಕೂ ಹೆಚ್ಚು ಅನಲಾಗ್ ಎಂಜಿನಿಯರುಗಳು ಇದ್ದಾರೆ ಎಂದರು.

ನಮ್ಮಲ್ಲಿ ಈಗಾಗಲೇ ಫಾಕ್ಸ್ ಕಾನ್, ವಿಸ್ಟ್ರಾನ್, ಎಟಿ & ಎಸ್, ಅಪ್ಲೈಡ್ ಮೆಟೀರಿಯಲ್ಸ್, ಸೆಂಟಂ, ಕೇನ್ಸ್, ಟಾಟಾ ಎಲೆಕ್ಟ್ರಾನಿಕ್ಸ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಡೆಲ್ಟಾ ಎಲೆಕ್ಟ್ರಾನಿಕ್ಸ್ ಮುಂತಾದ ಹಲವು ದಿಗ್ಗಜ ಕಂಪನಿಗಳು ನೆಲೆಯೂರಿವೆ. ಬಹಳ ದೀರ್ಘಾವಧಿ ಲಾಭವನ್ನು ಪರಿಗಣಿಸಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡವನ್ನು ಎಲೆಕ್ಟ್ರಾನಿಕ್ಸ್ ಉದ್ಯಮದ ಕ್ಲಸ್ಟರ್ಸ್ ಆಗಿ ಬೆಳೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

MB Patil
ಬೆಂಗಳೂರು ಜಾಗತಿಕ ಟೆಕ್ ಹಬ್; ಕೇಂದ್ರ, ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು: ಪಿಯೂಷ್ ಗೋಯಲ್

ರಾಜ್ಯದಲ್ಲಿ ಚಿಪ್ ವಿನ್ಯಾಸ ಮಾಡುತ್ತಿರುವ 100ಕ್ಕೂ ಹೆಚ್ಚು ಕಂಪನಿಗಳಿದ್ದು, ದೇಶದ ಶೇಕಡ 55ರಷ್ಟು ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ನವೋದ್ಯಮಗಳು ನಮ್ಮಲ್ಲೇ ಇವೆ. ಇಲ್ಲಿನ ಕೈಗಾರಿಕಾ ಪರಿವ್ಯವಸ್ಥೆಯಲ್ಲಿ ಸಾಫ್ಟ್-ವೇರ್, ಹಾರ್ಡ್-ವೇರ್ ಎಂಜಿನಿಯರಿಂಗ್, ಪರೀಕ್ಷಾ ವ್ಯವಸ್ಥೆ, ಉತ್ಪಾದನೆ, ಕೈಗಾರಿಕಾ ತಂತ್ರಜ್ಞಾನ ಮತ್ತು ನವೋದ್ಯಮ ನಾವೀನ್ಯತೆ ಎಲ್ಲವೂ ಮೇಳೈಸಿಕೊಂಡಿರುವುದು ವರದಾನವಾಗಿದೆ ಎಂದು ಅವರು ನುಡಿದಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ವಿದ್ಯುನ್ಮಾನ ವಿನ್ಯಾಸದಲ್ಲಿ ರಾಜ್ಯದ ಪಾಲು ಶೇಕಡ 40ರಷ್ಟಿದ್ದು, ಉತ್ಪಾದನೆಯಲ್ಲಿ ಶೇಕಡ 10ರಷ್ಟು ಪಾಲು ನಮ್ಮದಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಬಿಡಿಭಾಗಗಳ ತಯಾರಿಕೆ, ಸೆಮಿಕಂಡಕ್ಟರ್ ಪೂರೈಕೆ ಸರಪಳಿಯ ಬಲವರ್ಧನಗಳಿಗೆ ಆದ್ಯತೆ ಕೊಡುವ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು, ನವೋದ್ಯಮಗಳು, ಹೂಡಿಕೆದಾರರು, ಪಾಲುದಾರರರಿಗೆ ಸರಕಾರದ ಸಂಪೂರ್ಣ ಬೆಂಬಲವಿದೆ ಎಂದು ಪಾಟೀಲ ಭರವಸೆ ಕೊಟ್ಟಿದ್ದಾರೆ.

ಸಚಿವರು ಸಮಾವೇಶದ ನಂತರ ವಸ್ತು ಪ್ರದರ್ಶನ ವೀಕ್ಷಣೆ ಮಾಡಿ, ಸಂಸ್ಥೆಗಳ ಪ್ರತಿನಿಧಿಗಳ ಜತೆಗೆ ಚರ್ಚೆ ನಡೆಸಿ, ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com