ಕನಕಪುರ ರಸ್ತೆಯಲ್ಲಿ ಭೀಕರ ಅಪಘಾತ; ಬೈಕ್ ಗೆ ಟಿಪ್ಪರ್ ಢಿಕ್ಕಿ, ಪತಿ ಜೊತೆ ಹೋಗುತ್ತಿದ್ದ ಪತ್ನಿ ಸಾವು!

ಕಗ್ಗಲೀಪುರದ ಪಟ್ಟರೇದಪಾಳ್ಯ ಸಮೀಪದ ಕನಕಪುರ ರಸ್ತೆ ಮುಖ್ಯರಸ್ತೆಯಲ್ಲಿ ಬೆಳಗ್ಗೆ 11ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Tipper runs over scooter, kills woman on Kanakapura Road
ಕನಕಪುರ ರಸ್ತೆಯಲ್ಲಿ ಅಪಘಾತ
Updated on: 

ಬೆಂಗಳೂರು: ಕನಕಪುರ ರಸ್ತೆಯಲ್ಲಿ ವೇಗವಾಗಿ ಬಂದ ಟಿಪ್ಪರ್ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಸ್ಕೂಟರ್‌ನಲ್ಲಿ ಪತಿ ಜೊತೆ ಹಿಂಬದಿ ಕುಳಿತಿದ್ದ 57 ವರ್ಷದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಕಗ್ಗಲೀಪುರದ ಪಟ್ಟರೇದಪಾಳ್ಯ ಸಮೀಪದ ಕನಕಪುರ ರಸ್ತೆ ಮುಖ್ಯರಸ್ತೆಯಲ್ಲಿ ಬೆಳಗ್ಗೆ 11ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ನಾಗರತ್ನ (57) ಎಂದು ಗುರುತಿಸಲಾಗಿದೆ. ನಾಗರತ್ನ ಅವರು ಪತಿಯೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಹಿಂಬದಿ ಕುಳಿತಿದ್ದ ನಾಗರತ್ನ ಅವರು ರಸ್ತೆಗೆ ಬಿದ್ದಿದ್ದು, ಟಿಪ್ಪರ್ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Tipper runs over scooter, kills woman on Kanakapura Road
ಮ್ಯಾನ್‌ಹೋಲ್‌ಗೆ ಬಿದ್ದ ಕಾರ್ಮಿಕರು: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ!

ಪ್ರಕರಣ ದಾಖಲು

“ಡಿಕ್ಕಿ ಸಂಭವಿಸಿದಾಗ ಟಿಪ್ಪರ್ ವೇಗವಾಗಿ ಚಲಿಸುತ್ತಿತ್ತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು, ನಿರ್ಲಕ್ಷ್ಯದ ಚಾಲನೆಯಿಂದ ಸಾವು ಸಂಭವಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಬೈಪಾಸ್‌ಗಾಗಿ ಸ್ಥಳೀಯರ ಪ್ರತಿಭಟನೆ

ಅಪಘಾತದ ಬಳಿಕ ಸ್ಥಳೀಯರು ಹಾಗೂ ರೈತ ಸಂಘಟನೆಗಳ ಸದಸ್ಯರು ಬೈಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅಪಘಾತದ ಬೆನ್ನಲ್ಲೇ ಸ್ಥಳೀಯರು ಹಾಗೂ ರೈತ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕನಕಪುರ ರಸ್ತೆಯ ಕಗ್ಗಲೀಪುರ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಲವು ವರ್ಷಗಳಿಂದ ಬೈಪಾಸ್ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಲಾಗುತ್ತಿದೆ. ಆದರೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಭಾರೀ ವಾಹನಗಳ ಸಂಚಾರದಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯ ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ನದೀಮ್ ಪಾಷಾ ಮಾತನಾಡಿ, ಬೈಪಾಸ್ ಇಲ್ಲದಿರುವುದರಿಂದ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಪಘಾತ ನಡೆದ ಸ್ಥಳದಲ್ಲೇ ಪ್ರತಿಭಟನೆ ಘೋಷಿಸಿದರು. “ನಮ್ಮ ಕಣ್ಣೆದುರೇ ಮತ್ತೊಂದು ಅಮಾಯಕ ಜೀವ ಹೋಗಿದೆ. ಇದು ನೋಡುವುದಕ್ಕೂ ಸಾಧ್ಯವಾಗದಂತಹ ದುರಂತ. ಅಮಾಯಕ ಜೀವಗಳನ್ನು ರಕ್ಷಿಸಲು ಬೈಪಾಸ್ ನಿರ್ಮಾಣ ಮಾಡಬೇಕು” ಎಂದು ಅವರು ಒತ್ತಾಯಿಸಿದರು.

ಭಾನುವಾರವೂ ಇದೇ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನಾಕಾರರು ಪಾದಯಾತ್ರೆ ನಡೆಸಿದ್ದರು. ಅಪಘಾತದ ಸಂತ್ರಸ್ತರಂತೆ ವೇಷ ಧರಿಸಿ, ನಕಲಿ ಗಾಯಗಳ ಗುರುತುಗಳೊಂದಿಗೆ ಹಾಗೂ ವಿವಿಧ ಫಲಕಗಳನ್ನು ಹಿಡಿದು ಪ್ರತಿಭಟಿಸುವ ಮೂಲಕ ಈ ರಸ್ತೆಯಲ್ಲಿ ವೇಗದ ವಾಹನ ಸಂಚಾರದಿಂದ ಉಂಟಾಗುತ್ತಿರುವ ಅಪಾಯದ ಬಗ್ಗೆ ಗಮನ ಸೆಳೆದಿದ್ದರು.

ಕಗ್ಗಲೀಪುರದ ರಸ್ತೆಯಲ್ಲಿ ಟಿಪ್ಪರ್ ಹಾಗೂ ಲಾರಿಗಳಂತಹ ಭಾರೀ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದು, ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳಿಗೆ ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಪಾಷಾ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com