

ಬೆಂಗಳೂರು: ಬೆಂಗಳೂರು ನಗರದ ಹೊರವಲಯದಲ್ಲಿ ಭವಿಷ್ಯದ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಮತ್ತು ವ್ಯವಸ್ಥಿತ ನಗರೀಕರಣಕ್ಕೆ ದಾರಿ ಮಾಡಿಕೊಡಲು ರಾಜ್ಯ ಸರ್ಕಾರವು ಬೃಹತ್ ಹೊಸ ರಸ್ತೆ ಜಾಲ (Mobility Road Grid) ಯೋಜನೆ ರೂಪಿಸಿದೆ.
ಬೆಂಗಳೂರಿನ ಭವಿಷ್ಯದ ವಿಸ್ತರಣೆಗೆ ಯೋಜಿತ ರಸ್ತೆಗಳು ಹಾಗೂ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಿಂದ ಹೊರಗಿರುವ ಬೆಂಗಳೂರು ನಗರ ಜಿಲ್ಲೆಯ ಪ್ರದೇಶಗಳಿಗೆ ಹೊಸ ರಸ್ತೆ ಜಾಲವನ್ನು ರಾಜ್ಯ ಸರ್ಕಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಲ್ಲಿ ಬೆಂಗಳೂರಿನ ನಗರೀಕರಣ ವೇಗವಾಗಿ ನಡೆದಿದ್ದರೂ, ಅದಕ್ಕೆ ತಕ್ಕ ಮುನ್ನೆಚ್ಚರಿಕೆ ಹಾಗೂ ಯೋಜನೆ ರೂಪಿಸದ ಪರಿಣಾಮ ಇಂದು ಸಂಚಾರ ದಟ್ಟಣೆ, ರಸ್ತೆ, ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆಗಳು ಎದುರಾಗಿವೆ.
ಸುಮಾರು ಎರಡು ದಶಕಗಳ ಹಿಂದೆ 110 ಗ್ರಾಮಗಳು ಹಾಗೂ ಏಳು ನಗರಸಭೆಗಳನ್ನು ಬೆಂಗಳೂರಿನ ವ್ಯಾಪ್ತಿಗೆ ಸೇರಿಸಲಾಗಿತ್ತು. ಆದರೆ, ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿರಲಿಲ್ಲ. ಕಳೆದ ಎರಡು ದಶಕಗಳಲ್ಲಿ ಸತತ ಸರ್ಕಾರಗಳು ಈ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಹಾಗೂ ಉತ್ತಮ ರಸ್ತೆಗಳನ್ನು ಒದಗಿಸಲು ಪ್ರಯತ್ನಿಸಿದ್ದರೂ ಮೂಲಸೌಕರ್ಯದ ಕೊರತೆ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂದು ಹೇಳಿದರು.
ಜಿಬಿಎ ವ್ಯಾಪ್ತಿಯ ಹೊರಭಾಗಗಳಲ್ಲೂ ನಗರೀಕರಣ ವೇಗವಾಗಿ ವಿಸ್ತರಿಸುತ್ತಿದೆ. ಸದ್ಯ ಈ ಪ್ರದೇಶಗಳು ಜಿಬಿಎ ವ್ಯಾಪ್ತಿಗೆ ಸೇರದಿದ್ದರೂ, ಬೆಂಗಳೂರಿನ ವಿಸ್ತರಣೆಯ ಭಾಗಗಳಾಗಿ ಅಭಿವೃದ್ಧಿಯಾಗುತ್ತಿವೆ. ಮುಂದಿನ ದಿನಗಳಲ್ಲಿ ಇವು ನಗರದ ವಿಶಾಲ ನಗರ ವ್ಯಾಪ್ತಿಯ ಭಾಗವಾಗುವ ಸಾಧ್ಯತೆಯಿದೆ ಎಂದು ವಿವರಿಸಿದರು.
ಇದೇ ವೇಳೆ ತಜ್ಞರ ಅಂದಾಜನ್ನು ಉಲ್ಲೇಖಿಸಿದ ಸಚಿವರು, ಮುಂದಿನ ವರ್ಷಗಳಲ್ಲಿ ಬೆಂಗಳೂರಿನ ನಗರೀಕೃತ ಪ್ರದೇಶವು 1,400ರಿಂದ 1,800 ಚದರ ಕಿ.ಮೀ.ವರೆಗೆ ವಿಸ್ತರಿಸಬಹುದು. ಬೆಂಗಳೂರಿನ ಸುತ್ತಮುತ್ತ ನಡೆಯುತ್ತಿರುವ ನಗರೀಕರಣಕ್ಕೆ ಈಗಿನಿಂದಲೇ ಯೋಜನೆ ರೂಪಿಸದಿದ್ದರೆ, ಇಂದು ಬೆಂಗಳೂರಿನಲ್ಲಿ ಎದುರಾಗುತ್ತಿರುವ ಸಂಚಾರ ದಟ್ಟಣೆ ಹಾಗೂ ಒಳಚರಂಡಿ ಸಮಸ್ಯೆಗಳು ಈ ಪ್ರದೇಶಗಳಲ್ಲೂ ಎದುರಾಗಲಿವೆ ಎಂದು ಹೇಳಿದರು.
ಹೀಗಾಗಿ ಯೋಜಿತ ನಗರೀಕರಣ ಆರಂಭವಾಗುವ ಮೊದಲೇ ಯೋಜಿತ ಅಭಿವೃದ್ಧಿಯ ಚೌಕಟ್ಟು ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಸದ್ಯ ಎದುರಾಗುತ್ತಿರುವ ಸಮಸ್ಯೆಗಳು ಬೆಂಗಳೂರಿನ ವಿಸ್ತರಿಸುತ್ತಿರುವ ಹೊರವಲಯದಲ್ಲೂ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಯೋಜಿತ ಅಭಿವೃದ್ಧಿಯ ಭಾಗವಾಗಿ ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲೆಯ ಸಂಪೂರ್ಣ ಪ್ರದೇಶವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ವ್ಯಾಪ್ತಿಗೆ ತರಲಾಗಿದೆ. ಜಿಲ್ಲೆಯಾದ್ಯಂತ ಕುಡಿಯುವ ನೀರು ಪೂರೈಕೆ ಹಾಗೂ ಹಂತ ಹಂತವಾಗಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.
ಅದೇ ರೀತಿ, ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಹಾಗೂ ಇತರ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಹೊಸ ರಸ್ತೆ ಜಾಲವನ್ನು ಮಾಸ್ಟರ್ ಪ್ಲಾನ್‌ನಲ್ಲಿ ಗುರುತಿಸಲಾಗಿದೆ. ಸಂಪರ್ಕ ವ್ಯವಸ್ಥೆ ಸುಧಾರಿಸುವುದು ಹಾಗೂ ಭವಿಷ್ಯದ ಸಂಚಾರವನ್ನು ಸುಗಮಗೊಳಿಸುವುದು ಇದರ ಉದ್ದೇಶವಾಗಿದೆ.
ಈಗಾಗಲೇ ಅಭಿವೃದ್ಧಿಯಾಗಿರುವ ಜಿಬಿಎ ವ್ಯಾಪ್ತಿಯೊಳಗೆ ಹೊಸ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಅವಕಾಶವಿಲ್ಲ. ಏಕೆಂದರೆ ಬಹುತೇಕ ಪ್ರದೇಶಗಳಲ್ಲಿ ಬಡಾವಣೆಗಳು ಮತ್ತು ಕಟ್ಟಡಗಳು ನಿರ್ಮಾಣಗೊಂಡಿವೆ. ಹೀಗಾಗಿ ಸದ್ಯ ಅಭಿವೃದ್ಧಿಯಾಗುತ್ತಿರುವ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದು ತಿಳಿಸಿದರು.
ಅಧಿಸೂಚಿತ ರಸ್ತೆ ಜಾಲವು ತಾಲೂಕು ಕೇಂದ್ರಗಳು, ಹೋಬಳಿ ಕೇಂದ್ರಗಳು, ಪ್ರಮುಖ ಜಿಲ್ಲಾ ರಸ್ತೆಗಳು, ರಾಜ್ಯ ಹೆದ್ದಾರಿಗಳು, ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಹಾಗೂ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್)ಗಳನ್ನು ಪರಸ್ಪರ ಸಂಪರ್ಕಿಸಲಿದೆ. ಯೋಜಿತ ನಗರ ವಿಸ್ತರಣೆಗೆ ಅನುಕೂಲವಾಗುವಂತೆ ಈ ರಸ್ತೆಗಳನ್ನು ಗ್ರಿಡ್ ಮಾದರಿಯಲ್ಲಿ ಸಿಡಿಪಿ ರಸ್ತೆಗಳಾಗಿ ಸೂಚಿಸಲಾಗಿದೆ.
ಹೊಸ ಅಧಿಸೂಚನೆಯಲ್ಲಿ ನೂರಾರು ರಸ್ತೆಗಳು ಸೇರಿದ್ದು, ಅಗಲೀಕರಣಕ್ಕೆ ಪ್ರಸ್ತಾಪಿಸಲಾಗಿರುವ ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಹಾಗೂ ರಾಜ್ಯ ಹೆದ್ದಾರಿ ರಸ್ತೆಗಳೂ ಇದರಲ್ಲಿವೆ.
ಈ ಹಿಂದೆ ಕೆಲವೆಡೆ ಕೇವಲ 10 ಮೀಟರ್ ಅಗಲವಿದ್ದ ರಸ್ತೆಗಳನ್ನೂ 30 ಮೀಟರ್, 45 ಮೀಟರ್ ಹಾಗೂ ಕೆಲವು ಕಡೆ 90 ಮೀಟರ್‌ವರೆಗೆ ಅಗಲೀಕರಣಗೊಳಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಗುರುತಿಸಲಾದ ಸಂಪೂರ್ಣ ರಸ್ತೆ ಜಾಲ ನಿರ್ಮಾಣಕ್ಕೆ ಐದರಿಂದ ಹತ್ತು ವರ್ಷಗಳು ಬೇಕಾಗಬಹುದು. ಆದರೆ, ಅಧಿಸೂಚಿತ ರಸ್ತೆ ಮಾರ್ಗಗಳಿಗೆ ಅಗತ್ಯವಿರುವ ಜಮೀನನ್ನು ಹೊಸ ಬಡಾವಣೆ ನಿರ್ಮಿಸುವಾಗ ಅಥವಾ ಮನೆ ಕಟ್ಟುವಾಗ ಸಂಬಂಧಿತ ಕಾನೂನು ನಿಯಮಗಳ ಪ್ರಕಾರ ಖಾಲಿ ಬಿಡಬೇಕಾಗುತ್ತದೆ ಎಂದು ತಿಳಿಸಿದರು.
ಹೊಸ ಅಧಿಸೂಚನೆಯನ್ನು ಪರಿಶೀಲಿಸಿ, ಮನೆ ನಿರ್ಮಾಣ ಅಥವಾ ಬಡಾವಣೆ ಅಭಿವೃದ್ಧಿ ಕೈಗೊಳ್ಳುವ ಮೊದಲು ರಸ್ತೆ ಮಾರ್ಗಗಳ ವಿವರಗಳನ್ನು ತಿಳಿದುಕೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದರು.
ಹೊಸ ಅಧಿಸೂಚನೆಯ ಸಂಪೂರ್ಣ ವಿವರಗಳು ಬಿಎಂಆರ್‌ಡಿಎ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿವೆ.
ಹೊಸ ರಸ್ತೆ ಜಾಲದ ಪ್ರಮುಖ ಅಂಶಗಳು...
ಜಿಬಿಎ ವ್ಯಾಪ್ತಿಯ ಹೊರಗಿನ ಬೆಂಗಳೂರು ನಗರ ಜಿಲ್ಲೆಯ ಪ್ರದೇಶಗಳನ್ನು ಒಳಗೊಂಡಿದೆ. ವೇಗವಾಗಿ ನಡೆಯುತ್ತಿರುವ ನಗರ ವಿಸ್ತರಣೆಯನ್ನು ಯೋಜಿತಗೊಳಿಸಿ, ಭವಿಷ್ಯದ ಸಂಚಾರ, ರಸ್ತೆ, ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆಗಳನ್ನು ತಡೆಯುವ ಉದ್ದೇಶ ಹೊಂದಿದೆ.
ಬಿಎಂಆರ್‌ಡಿಎ ಹಾಗೂ ಇತರ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯ ಪ್ರದೇಶಗಳನ್ನು ಒಳಗೊಂಡಿದೆ.
ತಾಲೂಕು ಮತ್ತು ಹೋಬಳಿ ಕೇಂದ್ರಗಳು, ಪ್ರಮುಖ ಜಿಲ್ಲಾ ರಸ್ತೆಗಳು, ರಾಜ್ಯ ಹೆದ್ದಾರಿಗಳು, ಪಿಆರ್‌ಆರ್ ಹಾಗೂ ಎಸ್‌ಟಿಆರ್‌ಆರ್‌ಗಳನ್ನು ಸಂಪರ್ಕಿಸಲಿದೆ.
ಜಿಲ್ಲಾ ಪಂಚಾಯಿತಿ, ಪಿಡಬ್ಲ್ಯುಡಿ ಹಾಗೂ ರಾಜ್ಯ ಹೆದ್ದಾರಿ ಸೇರಿದಂತೆ ನೂರಾರು ರಸ್ತೆಗಳನ್ನು ಅಗಲೀಕರಣಕ್ಕೆ ಗುರುತಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಸಂಪೂರ್ಣ ಪ್ರದೇಶವನ್ನು ಬಿಡಬ್ಲ್ಯುಎಸ್‌ಎಸ್‌ಬಿ ವ್ಯಾಪ್ತಿಗೆ ತರಲಾಗಿದ್ದು, ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ.
ಸಂಪೂರ್ಣ ರಸ್ತೆ ಜಾಲ ನಿರ್ಮಾಣಕ್ಕೆ ಐದರಿಂದ ಹತ್ತು ವರ್ಷಗಳು ಬೇಕಾಗಬಹುದು.
ಅಧಿಸೂಚಿತ ರಸ್ತೆ ಮಾರ್ಗಗಳಲ್ಲಿನ ಜಮೀನನ್ನು ಬಡಾವಣೆ ಅಥವಾ ಮನೆ ನಿರ್ಮಾಣದ ವೇಳೆ ಕಾನೂನು ಪ್ರಕಾರ ಖಾಲಿ ಬಿಡಬೇಕಾಗುತ್ತದೆ.
ಜಮೀನು ಖರೀದಿ, ಬಡಾವಣೆ ಅಭಿವೃದ್ಧಿ ಅಥವಾ ಮನೆ ನಿರ್ಮಾಣಕ್ಕೂ ಮುನ್ನ ರಸ್ತೆ ಮಾರ್ಗಗಳನ್ನು ಪರಿಶೀಲಿಸುವಂತೆ ನಾಗರಿಕರಿಗೆ ಸೂಚಿಸಲಾಗಿದೆ.