ಈಗಿನ ಸುದ್ದಿ

ಮುಷರಫ್ ನಾಮಪತ್ರ ತಿರಸ್ಕಾರ

Published On :

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ನಾಮಪತ್ರವನ್ನು ಪಾಕ್ ಚುನಾವಣಾ ಆಯೋಗ ತಿರಸ್ಕರಿಸಿದೆ.

ಮತ್ತೆ ಪಾಕಿಸ್ತಾನದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಮಹದಾಸೆಯೊಂದಿಗೆ ತಮ್ಮ ಸ್ವದೇಶಕ್ಕೆ ಆಗಮಿಸಿರುವ ಪಾಕ್ ಮಾಜಿ ಅಧ್ಯಕ್ಷ ಮುಷರಫ್ ಅವರಿಗೆ ಪಾಕಿಸ್ತಾನ ಚುನಾವಣಾ ಆಯೋಗ ಶಾಕ್ ನೀಡಿದೆ. ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಿಂದ ಸ್ಪರ್ಧೆ ಬಯಸಿದ್ದ ಮುಷರಫ್ ಅವರ ಒಂದು ಕ್ಷೇತ್ರದ ಸ್ಫರ್ಧೆಯನ್ನು ಆಯೋಗ ಅನೂರ್ಜಿತಗೊಳಿಸಿದೆ.

ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಮುಷರಫ್ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದರು. ಕರಾಚಿ, ಇಸ್ಲಾಮಾಬಾದ್, ಕಸೂರ್ ಮತ್ತು ಚಿತ್ರಾಲ್ ಕ್ಷೇತ್ರಗಳ ಪೈಕಿ ಕಸೂರ್ ಕ್ಷೇತ್ರದ ನಾಮಪತ್ರವನ್ನು ಆಯೋಗ ರದ್ದುಗೊಳಿಸಿದೆ.

ಕಸೂರ್‌ನ ಪ್ರತಿಸ್ಪರ್ಧಿ ಜಾವೇದ್ ಕಸೂರಿ ಅವರು ಮುಷರಫ್ ಸ್ಪರ್ಧೆ ಬಗ್ಗೆ ತಕರಾರು ತೆಗೆದ ಕಾರಣ ಮುಷರಫ್ ಅವರ ಸ್ಪರ್ಧೆಯನ್ನು ಅನೂರ್ಜಿತಗೊಳಿಸಲಾಗಿದೆ. 'ಕಲಂ 62ರ ಪ್ರಕಾರ ಮುಷರಫ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಇಲ್ಲ. ಅವರ ಮೇಲೆ ಸಾಕಷ್ಟು ಕ್ರಿಮಿನಲ್ ಮೊಕದ್ದಮೆಗಳಿವೆ. ಅವುಗಳೆಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಕಸೂರಿ ಅವರು ಚುನಾವಣಾಧಿಕಾರಿ ಮಹಮದ್ ಸಲೀಂ ಅವರಿಗೆ ಪತ್ರ ಬರೆದಿದ್ದಾರೆ. ಪತ್ರ ಪರೀಕ್ಷಿಸಿದ ಸಲೀಂ ಅವರು ಮುಷರಫ್ ಅವರ ನಾಮಪತ್ರವನ್ನು ರದ್ದುಗೊಳಿಸಿದ್ದಾರೆ.

ಒಟ್ಟಾರೆ ಮತ್ತೆ ಪಾಕಿಸ್ತಾನದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮುಷರಫ್ ಅವರ ಯತ್ನಕ್ಕೆ ಚುನಾವಣಾ ಆಯೋಗ ಆರಂಭಿಕ ಕೊಡಲಿ ಏಟು ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.