ಈಗಿನ ಸುದ್ದಿ

ಮೇ 9ರಂದು ಖುರ್ಷೀದ್ ಚೀನಾ ಪ್ರವಾಸ

ಮೇ 9ರಂದು ಖುರ್ಷೀದ್ ಚೀನಾ ಪ್ರವಾಸ
Published On :

ನವದೆಹಲಿ: ಮುಂದಿನ ಮೇ 9 ರಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರು ಚೀನಾ ಪ್ರವಾಸ ಕೈಗೊಳ್ಳಲಿದ್ದು, ಪ್ರವಾಸದಲ್ಲಿ ಚೀನಾ ಯೋಧರ ಗಡಿ ಅತಿಕ್ರಮಣ ವಿಚಾರದ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

ಗಡಿ ಅತಿಕ್ರಮಣ ವಿಚಾರದಿಂದಾಗಿ ಉಭಯ ದೇಶಗಳ ಮಧ್ಯೆ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರ ಭೇಟಿ ಬಹಳ ಪ್ರಾಮುಖ್ಯತೆ ಪಡೆದಿದೆ. ಅಂತೆಯೇ ಖುರ್ಷೀದ್ ಭೇಟಿ ನಂತರ ಚೀನಾ ಪ್ರಧಾನಿ ಲೀ ಕೆಕಯಾಂಗ್ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಅವರು ಪ್ರಧಾನಿಯಾದ ನಂತರ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಳ್ಳಲ್ಲಿದ್ದಾರೆ.

ತಮ್ಮ ಚೀನಾ ಪ್ರವಾಸದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಖುರ್ಷೀದ್ ಅವರು, ಮೇ 9ರಂದು ಚೀನಾ ಪ್ರವಾಸ ಕೈಗೊಂಡಿದ್ದೇನೆ. ಉಭಯ ದೇಶಗಳ ನಡುವೆ ಉಂಟಾಗಿರುವ ಗಡಿ ಅತಿಕ್ರಮಣ ಬಿಕ್ಕಟ್ಟು ಸಮಾಲೋಚನೆಗಳ ಮೂಲಕ ಬಗೆಹರಿಯಲಿದೆ. ಬಿಕ್ಕಟ್ಟನ್ನು ಬಗೆಹರಿಸಲು ಭಾರತ ಮತ್ತು ಚೀನಾ ದೇಶಗಳು ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ಎರಡೂ ದೇಶಗಳೂ ತಮ್ಮದೇ ಆದ ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಿವೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಬಿಕ್ಕಟ್ಟು ಶೀಘ್ರವೇ ಬಗೆಹರಿಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಏಪ್ರಿಲ್ 15ರಂದು ಚೀನಾದ ಯೋಧರು ಭಾರತ ಗಡಿಯನ್ನು ಆತಿಕ್ರಮಿಸಿ ಅಕ್ರಮವಾಗಿ ಡೇರೆಗಳನ್ನು ನಿರ್ಮಿಸಿಕೊಂಡಿದ್ದರು. ಭಾರತದ ಗಡಿಪ್ರದೇಶವಾದ ಲಡಾಕ್‌ನ ದೌಲತ್ ಬೇಗ್ ಓಲ್ಡಿ ಸೆಕ್ಟರ್(ಡಿಬಿಒ)ನಲ್ಲಿರುವ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ 10 ಕಿ.ಮೀ ವ್ಯಾಪ್ತಿಯಲ್ಲಿ ಚೀನಾ ಯೋಧರು ಒಳನುಸುಳಿರುವುದು ಕಂಡುಬಂದಿತ್ತು.  ಗಡಿ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿರುವ ಚೀನಾ ಯೋಧರ ವರ್ತನೆಗೆ ಭಾರತದಿಂದ ತೀವ್ರ ಆಕ್ಷೇಪಗಳು ಕೇಳಿಬಂದಿತ್ತು. ಉಭಯ ದೇಶಗಳ ಸೇನಾ ಬ್ರಿಗೇಡಿಯರ್‌ಗಳು 2 ಬಾರಿ ಧ್ವಜ ಸಭೆಯನ್ನು ನಡೆಸಿ ಚರ್ಚಿಸಿದ್ದು, ಚೀನಾ ತನ್ನ ತಪ್ಪನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣ ನೆಲೆಸಿದ್ದು, ಘಟನಾ ಪ್ರದೇಶಕ್ಕೆ ಭಾರತ 5 ವಿಶೇಷ ಸೈನಿಕ ತಂಡಗಳನ್ನು ರವಾನಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.