ಶಾರದಾ ಗ್ರೂಪ್ಸ್ ಅವ್ಯವಹಾರ: ತನಿಖೆಗೆ ಆದೇಶ ಸಾಧ್ಯತೆ

ಲಖನೌ: ಪಶ್ಚಿಮ ಬಂಗಾಳದ ಶಾರದಾ ಗ್ರೂಪ್ಸ್ ಚಿಟ್ ಫಂಡ್ ಸಂಸ್ಥೆಯ ಅವ್ಯವಹಾರ ಪ್ರಕರಣವನ್ನು ತನಿಖೆಗೆ ಆದೇಶಿಸಲು ಕೇಂದ್ರ ವಾಣಿಜ್ಯ ವ್ಯವಹಾರಗಳ ಸಚಿವ ಸಚಿನ್ ಪೈಲಟ್ ನಿರ್ಧರಿಸಿದ್ದಾರೆ.
ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಪಶ್ಚಿಮ ಬಂಗಾಳದ ಶಾರದಾ ಗ್ರೂಪ್ಸ್ ಸಂಸ್ಥೆಯ ಅವ್ಯವಹಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಚಿವ ಸಚಿನ್ ಪೈಲಟ್ ಅವರು, ವಿವಾದ ಸಂಬಂಧ ಸಂಸ್ಥೆಯ ವಿರುದ್ಧ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ. ಇಂದು ಸಂಜೆ ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ಹಿರಿಯ ಸಚಿವರೊಂದಿಗೆ ಸಚಿನ್ ಪೈಲಟ್ ಚರ್ಚೆ ನಡೆಸಲಿದ್ದು, ಸಭೆ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲ್ಲಿದ್ದಾರೆ.
ಸಭೆಯಲ್ಲಿ ಶಾರದಾ ಸಂಸ್ಥೆಯಷ್ಟೇ ಅಲ್ಲದೇ, ದೇಶದ ವಿವಿಧ ರಾಜ್ಯಗಳಲ್ಲಿ ಜನರಿಂದ ಹಣತೊಡಗಿಸಿಕೊಳ್ಳುತ್ತಿರುವ ಇತರೆ ಸಂಸ್ಥೆಗಳ ಕಾರ್ಯಾಚರಣೆಯ ಕುರಿತು ಸಚಿವರು ಮಾಹಿತಿ ಸಂಗ್ರಹಿಸಲಿದ್ದಾರೆ. ಶಾರದಾ ಗ್ರೂಪ್ಸ್ ಪ್ರಕರಣವಷ್ಟೇ ಅಲ್ಲದೆ, ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 73 ನಕಲಿ ಚಿಟ್ ಫಂಡ್ ಸಂಸ್ಥೆಗಳ ಕುರಿತು ಕೇಂದ್ರ ವಾಣಿಜ್ಯ ವ್ಯವಹಾರ ಇಲಾಖೆಗೆ ಸಾಕಷ್ಟು ದೂರುಗಳ ಬಂದಿವೆ. ಈ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ ಅತಿ ದೊಡ್ಡ ಹಗರಣವೆಂದು ಹೇಳಲಾಗುತ್ತಿರುವ ಶಾರದಾ ಚಿಟ್ ಫಂಡ್ ಗ್ರೂಪ್ಸ್ ಸಂಸ್ಥೆಯ ಮೋಸದಿಂದಾಗಿ, ಸಂಸ್ಥೆಯಲ್ಲಿ ಹಣ ತೊಡಗಿಸಿದ್ದ ಸಾವಿರಾರು ಸಾರ್ವಜನಿಕರ ಭವಿಷ್ಯ ಇದೀಗ ತೂಗುಯ್ಯಾಲೆ ಸ್ಥಿತಿ ತಲುಪಿದೆ. ಕರ್ನಾಟಕದ ವಿನಿವಿಂಕ್ ಸಂಸ್ಥೆಯ ಹಗರಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಶಾರದಾ ಚಿಟ್ ಫಂಡ್ ಸಂಸ್ಥೆ ಗ್ರಾಹಕರಿಂದ ಸುಮಾರು 3ಸಾವಿರ ಕೋಟಿ ರು.ಗಳನ್ನು ಶೇಖರಿಸಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸೆಬಿ ಮತ್ತು ಆದಾಯ ತೆರಿಗೆ ಇಲಾಖೆಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸಂಸ್ಥೆಯ ವಿರುದ್ಧ ತನಿಖೆ ನಡೆಸಲು ಮುಂದಾಗಿವೆ.
ಸಂಸ್ಥೆಯ ಮೊಸ ಬಹಿರಂಗವಾಗುತ್ತಿದ್ದಂತೆಯೇ ಕೊಲ್ಕತಾ ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ಶಾರದಾ ಗ್ರೂಪ್ಸ್‌ನ ಎಲ್ಲ ಕಚೇರಿಗಳಿಗೂ ಬೀಗ ಜಡಿಯಲಾಗಿದ್ದು, ಹಲವು ಕಚೇರಿಗಳ ಮೇಲೆ ಸಾರ್ವಜನಿಕರು ದಾಳಿ ಮಾಡಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಶಾರದಾ ಗ್ರೂಪ್ಸ್ ಹಗರಣದಲ್ಲಿ ಪಶ್ಚಿಮ ಬಂಗಾಳದ ಕೆಲ ಸಚಿವರು ಮತ್ತು ಕೆಲ ಪ್ರಭಾವಿ ಶಾಸಕರ ಹೆಸರುಗಳು ಕೇಳಿಬರುತ್ತಿದ್ದು, ಸಂಸ್ಥೆಯ ಕೆಲ ಸದಸ್ಯರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರಕರಣ ಸಂಬಂಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾತನಾಡಿ, ಹೂಡಿಕೆದಾರರಿಗೆ ನ್ಯಾಯದೊರಕಿಸಿ ಕೊಡುವ ಆಶ್ವಾಸನೆ ನೀಡಿದ್ದಾರೆ. ಅಲ್ಲದೆ ಸಂಸ್ಥೆಯ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


