ಗಡಿ ಅತಿಕ್ರಮಣ ವಿಚಾರ ಶೀಘ್ರ ಬಗೆಹರಿಯಲಿದೆ: ಪ್ರಧಾನಿ ಸಿಂಗ್

ನವದೆಹಲಿ: ಚೀನಾ ಯೋಧರ ಅತಿಕ್ರಮಣ ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿದ್ದಾರೆ.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ರಕ್ಷಣಾ ಇಲಾಖೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್, ಗಡಿ ಅತಿಕ್ರಮಣ ವಿಚಾರ ದೇಶದ ಸ್ಥಳೀಯ ವಿಚಾರವಲ್ಲ. ಇಂತಹ ಸೂಕ್ಷ್ಮ ವಿಚಾರಗಳನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಶಕ್ತವಾಗಿದೆ. ಪ್ರತಿಪಕ್ಷಗಳು ಸಂದರ್ಭವನ್ನು ಅರಿತು ಮಾತನಾಡಬೇಕು ಎಂದು ಅವರು ತೀಕ್ಷ್ಣವಾಗಿ ಉತ್ತರಿಸದರು.
ಚೀನಾ ಯೋಧರ ಗಡಿ ಅತಿಕ್ರಮಣ ವಿಚಾರ ಗಂಭೀರವಾಗಿದ್ದು, ಇದನ್ನು ಬಗೆಹರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ವಿದೇಶಾಂಗ ಇಲಾಖೆಯು ಈ ಬಗ್ಗೆ ಚೀನಾ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಪ್ರಸ್ತುತ ಸಮಸ್ಯೆಯ ಬಗ್ಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಡದೇ, ಶಾಂತಿಯುತವಾಗಿ ಬಗೆಹರಿಸಲು ನಾವು ಕ್ರಮಕೈಗೊಂಡಿದ್ದೇವೆ. ಉಭಯ ದೇಶಗಳ ನಡುವೆ ಪ್ರಕ್ಷುಬ್ದ ವಾತಾವರಣ ನಿರ್ಮಿಸುವ ಮೂಲಕ ಸಮಸ್ಯೆಯನ್ನು ಮತ್ತಷ್ಟು ಉಲ್ಬಣ ಮಾಡಲು ನಮಗೆ ಇಷ್ಟವಿಲ್ಲ. ಇದು ಸ್ಥಳೀಯ ಸಮಸ್ಯೆಯಾಗಿದ್ದು, ಮಾತುಕತೆಗಳ ಮೂಲಕ ಬಗೆಹರಿಸಬಹುದಾಗಿದೆ ಎಂದು ಸಿಂಗ್ ಹೇಳಿದರು.
ಸರಬ್ಜಿತ್ ಸಿಂಗ್ ಮೇಲಿನ ಹಲ್ಲೆ ವಿಷಾದಕರ
ಅಂತೆಯೇ ಪಾಕಿಸ್ತಾನದಲ್ಲಿ ಭಾರತೀಯ ಮೂಲದ ಖೈದಿ ಸರಬ್ಜಿತ್ ಸಿಂಗ್ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಖಂಡಿಸಿದ ಮನಮೋಹನ್ ಸಿಂಗ್ ಅವರು, ಹಲ್ಲೆ ಪ್ರಕರಣ ವಿಷಾದಕರ ಎಂದು ಹೇಳಿದರು.
ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಮೇಲೆ ನಿನ್ನೆ ಲಾಹೋರ್ನ ಕೋಟ್ ಲಕಪತ್ ಜೈಲಿನ ಸಹ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಹಲ್ಲೆಗೊಳಗಾಗಿರುವ ಸರಬ್ಜಿತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆತ ಕೋಮಾ ಸ್ಥಿತಿಯನ್ನು ತಲುಪಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಗಂಭೀರವಾಗಿ ಗಾಯಗೊಂಡಿರುವ ಸರಬ್ಜಿತ್ ಸಿಂಗ್ ಅವರನ್ನು ಸಮೀಪದ ಜಿನ್ನಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಸರಬ್ಜಿತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದರೂ, ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವುದರಿಂದ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸರಬ್ಜಿತ್ ಮೇಲಿನ ಹಲ್ಲೆಗೆ ಭಾರತದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಪಾಕಿಸ್ತಾನದಲ್ಲಿಯೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದೀಗ ಎಚ್ಚೆತ್ತುಕೊಂಡಿರುವ ಪಾಕ್ ಸರ್ಕಾರ, ಲಾಹೋರ್ ಜೈಲು ಅಧೀಕ್ಷಕ ಸೇರಿದಂತೆ ಖೈದಿಗಳ ಮೇಲ್ವಿಚಾರಣೆ ನಡೆಸುತ್ತಿದ್ದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


