ಈಗಿನ ಸುದ್ದಿ

ಯುಪಿಎ ದುರ್ಬಲ ವಿದೇಶಾಂಗ ನೀತಿಯಿಂದ ಬಳಲುತ್ತಿದೆ: ಮೋದಿ

ಯುಪಿಎ ದುರ್ಬಲ ವಿದೇಶಾಂಗ ನೀತಿಯಿಂದ ಬಳಲುತ್ತಿದೆ: ಮೋದಿ
Published On :

ಗಾಂಧಿನಗರ: ಕೇಂದ್ರದ ಯುಪಿಎ ಸರ್ಕಾರ ದುರ್ಬಲ ವಿದೇಶಾಂಗ ನೀತಿಗಳಿಂದಾಗಿ ಬಳಲುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಗಾಂಧಿನಗರದಲ್ಲಿ ಆಯೋಜಿಸಲಾಗಿದ್ದ ಗುಜರಾತ್ ಪಬ್ಲಿಕ್ ಪ್ರಾಸಿಕ್ಯೂಟರ್ಸ್ ಒಕ್ಕೂಟದ ಸೆಮಿನಾರ್‌ನಲ್ಲಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು, ದುರ್ಬಲ ವಿದೇಶಾಂಗ ನೀತಿಗಳಿಂದ ಬಳಲುತ್ತಿರುವ ಕೇಂದ್ರದ ಯುಪಿಎ ಸರ್ಕಾರ, ಪ್ರಮುಖ ವಿಚಾರಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಚೀನಾ ಅಕ್ರಮ ಗಡಿ ಪ್ರವೇಶ, ಭಾರತೀಯ ಮೀನುಗಾರರ ಹತ್ಯಾಪ್ರಕರಣ ಮತ್ತು ಪ್ರಸ್ತುತ ಸರಬ್ಜಿತ್ ಸಿಂಗ್ ಪ್ರಕರಣವನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿ ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಮೇಲಿನ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿದ ಅವರು, 'ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗಳು ಬಲಿಷ್ಠವಾಗಿದ್ದಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಸರಬ್ಜಿತ್‌ಸಿಂಗ್ ಮೇಲಿನ ಹಲ್ಲೆ ಪ್ರಕರಣ ಕೇಂದ್ರ ಸರ್ಕಾರದ ವಿಫಲತೆಗೆ ಹಿಡಿದ ಕನ್ನಡಿಯಾಗಿದೆ. ಒಂದರ ಹಿಂದೆ ಮತ್ತೊಂದರಂತೆ ಘಟನಾವಳಿಗಳ ಸರಮಾಲೆಗಳೇ ಜರುಗುತ್ತಿದ್ದರೂ, ಸರ್ಕಾರದಿಂದ ಏನು ಮಾಡಲೂ ಸಾಧ್ಯವಾಗುತ್ತಿಲ್ಲ. ಇದು ಸರ್ಕಾರದ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ಕೇಂದ್ರ ಸರ್ಕಾರ ಸತ್ಯವನ್ನು ಪರಿಣಾಮಕಾರಿಯಾಗಿ ಜಗತ್ತಿಗೆ ಪ್ರಚಾರ ಮಾಡುತ್ತಿಲ್ಲ. ಇದು ಪ್ರಪಂಚಕ್ಕೆ ನಮ್ಮ ನಿಶ್ಚಲತೆಯನ್ನು ತೋರಿಸುತ್ತದೆ. ನಮ್ಮ ರಾಜತಾಂತ್ರಿಕ ನೀತಿಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಅನ್ಯ ರಾಷ್ಟ್ರಗಳಿಗೆ ನಮ್ಮ ಸಾಮರ್ಥ್ಯ ಏನು ಎಂಬುದನ್ನು ನಾವು ಧೈರ್ಯದಿಂದ ತೋರಿಸಬೇಕು' ಎಂದು ಮೋದಿ ಯುಪಿಎ ಸರ್ಕಾರವನ್ನು ಕಟುವಾಗಿ ಟೀಕಿಸಿದರು.

'ಹಗರಣಗಳಿಂದ ತೋಯ್ದು ಹೋಗಿರುವ ಸರ್ಕಾರಕ್ಕೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ದೇಶದ ಜನತೆಯನ್ನು ರಕ್ಷಿಸಲು ಅದಕ್ಕೆಲ್ಲಿ ಸಮಯವಿರುತ್ತದೆ' ಎಂದು ಮೋದಿ ವ್ಯಂಗ್ಯವಾಡಿದರು.

ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಮೇಲೆ ನಿನ್ನೆ ಲಾಹೋರ್ ಜೈಲಿನ ಸಹ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಹಲ್ಲೆಗೊಳಗಾಗಿರುವ ಸರಬ್ಜಿತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆತ ಕೋಮಾ ಸ್ಥಿತಿಯನ್ನು ತಲುಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸರಬ್ಜಿತ್ ಮೇಲಿನ ಹಲ್ಲೆಗೆ ಭಾರತದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಪಾಕಿಸ್ತಾನದಲ್ಲಿಯೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಇದೀಗ ಎಚ್ಚೆತ್ತುಕೊಂಡಿರುವ ಪಾಕ್ ಸರ್ಕಾರ, ಲಾಹೋರ್ ಜೈಲು ಅಧೀಕ್ಷಕ ಸೇರಿದಂತೆ ಖೈದಿಗಳ ಮೇಲ್ವಿಚಾರಣೆ ನಡೆಸುತ್ತಿದ್ದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.