180ರು.ಗಾಗಿ ಹತ್ಯೆ ಮಾಡಿದ ಹೊಟೆಲ್ ಮಾಲೀಕ
ನವದೆಹಲಿ: 180ರುಪಾಯಿಗಳ ಹೊಟೆಲ್ ಬಿಲ್ ಪಾವತಿ ಮಾಡಲಾಗದ ಗ್ರಾಹಕನನ್ನು ಮಾಲೀಕನೇ ಹತ್ಯೆಗೈದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಕಳೆದ ಒಂದು ವಾರದಿಂದ ಅತ್ಯಾಚಾರ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದ ರಾಜಧಾನಿ ನವದೆಹಲಿಯಲ್ಲಿ, ಕ್ಷುಲ್ಲಕ ಕಾರಣಕ್ಕೆ ವಕ್ತಿಯೊಬ್ಬ ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 180 ರುಪಾಯಿಗಳ ಹೊಟೆಲ್ ಬಿಲ್ ಪಾವತಿ ಮಾಡದ ಗ್ರಾಹಕನನ್ನು ಹೊಟೆಲ್ ಮಾಲೀಕ ಅಮಾನವೀಯವಾಗಿ ಥಳಿಸಿ, ಕಟ್ಟಡದ ಮೇಲಿಂದ ಕೆಳಗೆ ತಳ್ಳಿ ಹತ್ಯೆ ಮಾಡಿದ್ದಾನೆ.
ಮೃತ ವ್ಯಕ್ತಿಯನ್ನು ದೀಪಕ್(30 ವರ್ಷ) ಎಂದು ಗುರುತಿಸಲಾಗಿದ್ದು, ಆತ ನಿರುದ್ಯೋಗಿ ಎಂದು ತಿಳಿದು ಬಂದಿದೆ. ದೀಪಕ್ ಸಹೋದರ ಅಜಯ್ ಘಟನೆಯ ಕುರಿತು ಮಾಹಿತಿ ನೀಡಿದ್ದು, 'ಕಳೆದ ಬುಧವಾರ ದೀಪಕ್ ತನ್ನ ಸಂಬಂಧಿಕರೊಡನೆ ಊಟ ಮಾಡಲು ದಕ್ಷಿಣ ದೆಹಲಿಯ ಐಎನ್ಎ ಮಾರ್ಕೆಟ್ ಬಳಿ ಇರುವ ರೆಸ್ಟೋರೆಂಟ್ಗೆ ತೆರಳಿದ್ದ. ಊಟದ ಬಳಿಕ ಬಿಲ್ನ ಮೊತ್ತ ನಂತರ ಬಂದು ಪಾವತಿ ಮಾಡುವುದಾಗಿ ತಿಳಿಸಿದ್ದಾನೆ. ಆದರೆ ಇದಕ್ಕೊಪ್ಪದ ಹೊಟೆಲ್ ಮಾಲೀಕ ಮತ್ತು ಕೆಲ ಕೆಲಸಗಾರರು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಸೋಇಚ್ಛೆ ಥಳಿಸಿದ್ದಾರೆ. ನಂತರ ದೀಪಕ್ನನ್ನು ಮನೆಗೆ ಕರೆತಂದ ಅವರು, ನಮ್ಮ ಮನೆ ಮಂದಿ ಮುಂದೆಯೂ ಥಳಿಸಲು ಮುಂದಾದರು. ನಾವು ಬಿಲ್ ಪಾವತಿ ಮಾಡುತ್ತೇವೆ ಎಂದು ಹೇಳಿದರೂ ಕೇಳಿಸಿಕೊಳ್ಳದ ಅವರು, ಆತನನ್ನು ಮನೆಯ ಟೆರಸ್ಗೆ ಕರೆದೊಯ್ದು ಅಲ್ಲಿಂದ ತಳ್ಳಿದ್ದಾರೆ' ಎಂದು ಹೇಳಿದರು.
ತೀವ್ರವಾಗಿ ಗಾಯಗೊಂಡಿದ್ದ ದೀಪಕ್ನನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿತಾದರೂ, ಅಷ್ಟು ಹೊತ್ತಿಗಾಗಲೇ ಆತ ಮೃತಪಟ್ಟಿದ್ದ. ಪ್ರಕರಣ ದಾಖಲಿಸಿಕೊಂಡಿರುವ ದೆಹಲಿಯ ಕೋಟ್ಲಾ ಮುಬಾರಕ್ ಠಾಣೆಯ ಪೊಲೀಸರು ಹೊಟೆಲ್ ಮಾಲೀಕ ಸೇರಿದಂತೆ ಇತರೆ 3 ಮಂದಿ ನೌಕರರನ್ನು ಬಂಧಿಸಿದ್ದಾರೆ. ಅಲ್ಲದೆ ಘಟನೆ ನಡೆದ ಸಂದರ್ಭದಲ್ಲಿ ಹೊಟೆಲ್ನಲ್ಲಿದ್ದ ಇತರರ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟಾರೆ ಅತ್ಯಾಚಾರ ಪ್ರಕರಣಗಳಿಂದ ಕುಖ್ಯಾತಿಗೆ ಒಳಗಾಗಿರುವ ದೆಹಲಿಯಲ್ಲಿ ಕೇವಲ 180 ರುಪಾಯಿಗಾಗಿ ಹತ್ಯೆ ನಡೆದಿರುವುದು ನಿಜಕ್ಕೂ ದುರದೃಷ್ಟಕರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

