ಈಗಿನ ಸುದ್ದಿ

ಸರಬ್ಜಿತ್ ಸ್ಥಿತಿ ಗಂಭೀರ: ಪಾಕ್‌ಗೆ ತೆರಳಿದ ಕುಟುಂಬ

ಸರಬ್ಜಿತ್ ಸ್ಥಿತಿ ಗಂಭೀರ: ಪಾಕ್‌ಗೆ ತೆರಳಿದ ಕುಟುಂಬ
Published On :

ನವದಹೆಲಿ: ಪಾಕಿಸ್ತಾನ ಜೈಲಿನಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿರುವ ಭಾರತೀಯ ಮೂಲದ ಖೈದಿ ಸರಬ್ಜಿತ್ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಅವರನ್ನು ನೋಡಲು ಕುಟುಂಬದ ಸದಸ್ಯರು ಲಾಹೋರ್‌ಗೆ ತೆರಳಿದ್ದಾರೆ.

ಸರಬ್ಜಿತ್ ತಲೆಗೆ ಬಿದ್ದಿರುವ ಗಂಭೀರ ಹೊಡೆತದಿಂದಾಗಿ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಪ್ರಮುಖ ನರ ವ್ಯವಸ್ಥೆ ತೀರಾ ಹಾಳಾಗಿದೆ. ಗ್ಲಾಸ್ಕೋ ಕೋಮಾ ಸ್ಕೇಲ್ (ಜಿಸಿಎಸ್)ನಲ್ಲಿ ವೈದ್ಯರು 5 ಎಂದು ದಾಖಲು ಮಾಡಿದ್ದು, ಈ ವ್ಯವಸ್ಥೆ ವ್ಯಕ್ತಿಯ ನರಮಂಡಲದ ಮೇಲಾಗಿರುವ ಹಾನಿಯನ್ನು ಸೂಚಿಸುತ್ತದೆ. ಸರಬ್ಜಿತ್‌ಗೆ ತುರ್ತಾಗಿ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದರೂ ಅದನ್ನು ಮಾಡಲಾಗುತ್ತಿಲ್ಲ. ಏಕೆಂದರೆ ತಲೆಗೆ ಬಿದ್ದಿರುವ ಗಂಭೀರ ಗಾಯದಿಂದ ತೀವ್ರವಾದ ರಕ್ತಸ್ರಾವವಾಗಿದೆ. ಶಸ್ತ್ರ ಚಿಕಿತ್ಸೆ ನಡೆಸಿದರೆ ಆತನ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಹೀಗಾಗಿ ವೈದ್ಯರು ಸರಬ್ಜಿತ್‌ಗೆ ಶಸ್ತ್ರ ಚಿಕಿತ್ಸೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕ್‌ಗೆ ಹಾರಿದ ಕುಟುಂಬ
ಈ ನಡುವೆ ಗಾಯಗೊಂಡು ಕೋಮ ಸ್ಥಿತಿಯಲ್ಲಿರುವ ಸರಬ್ಜಿತ್‌ರನ್ನು ನೋಡಲು ಆತನ ಕುಟುಂಬ ಸದಸ್ಯರು ಇಂದು ಮಧ್ಯಾಹ್ನ ಇಡೋ-ಪಾಕ್‌ನ ವಾಘಾಗಡಿಯ ಮೂಲಕ ಪಾಕಿಸ್ತಾನದ ಲಾಹೋರ್‌ಗೆ ತೆರಳಿದರು. ಪಾಕ್‌ಗೆ ತೆರಳುವ ಮುನ್ನ ಸರಬ್ಜಿತ್ ಕುಟುಬಂದ ಸದಸ್ಯರು ಹರ್ಮೀಂದರ್ ಸಾಹಿಬ್ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಸರಬ್ಜಿತ್ ಕುಟುಂಬ ಸದಸ್ಯರ ಪೈಕಿ ನಾಲ್ಕು ಮಂದಿಗೆ ಅಂದರೆ ಸರಬ್ಜಿತ್ ಪತ್ನಿ ಸುಖ್‌ಪ್ರೀತ್ ಖೌರ್, ಸಹೋದರಿ ದಲ್‌ಬೀರ್ ಕೌರ್ ಮತ್ತು ಸರಬ್ಜಿತ್ ಪುತ್ರಿಯರಾದ ಪೂನಂ, ಸ್ವಪನ್‌ದೀಪ್ ಕೌರ್ ಅವರಿಗೆ ಪಾಕಿಸ್ತಾನ ಸರ್ಕಾರ ವೀಸಾ ನೀಡಿತ್ತು. ಈ ವೀಸಾವನ್ನು ಬಳಿಸಿಕೊಂಡು ಸರಬ್ಜಿತ್ ಕುಟುಂಬ ಮುಂದಿನ 15 ದಿನಗಳ ಕಾಲ ಪಾಕ್‌ನಲ್ಲಿ ತಂಗಬಹುದು.

'ಜನರ ಆಶೀರ್ವಾದ ಮತ್ತು ಅಪಾರ ನಂಬಿಕೆಗಳನ್ನು ಹೊತ್ತು ನಾವು ಪಾಕಿಸ್ತಾನಕ್ಕೆ ಹೊರಟಿದ್ದೇವೆ. ಸರಬ್ಜಿತ್ ಆರೋಗ್ಯದ ಬಗ್ಗೆ ನಮಗೆ ಕೊಂಚ ಕಳವಳವಿದೆ. ಅವರಿಗೆ ಏನು ಆಗದಂತೆ ನೋಡಿಕೊಳ್ಳಲು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ' ಎಂದು ಸರಬ್ಜಿತ್ ಸಹೋದರಿ ದಲ್‌ಬೀರ್ ಖೌರ್ ಹೇಳಿದರು.

'ನಮಗೆ ಈ ಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ತೆರಳುವ ಆಸೆ ಇಲ್ಲ. ಆದರೆ ನಮ್ಮ ತಂದೆಯ ಆರೋಗ್ಯ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಅವರನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕರೆತರಲು ಹೊರಟಿದ್ದೇವೆ' ಎಂದು ಸರಬ್ಜಿತ್ ಪುತ್ರಿ ಸ್ವಪನ್ ದೀಪ್ ಹೇಳಿದರು.

ಭಾರತೀಯ ರಾಯಭಾರಿಗಳಿಗೆ ನಿರ್ಭಂಧ

ಈ ನಡುವೆ ಸರಬ್ಜಿತ್ ಸಿಂಗ್‌ನನ್ನು ನೋಡಲು ಜಿನ್ನಾ ಆಸ್ಪತ್ರೆಗೆ ಬಂದಿದ್ದ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಪಾಕಿಸ್ತಾನ ಅಧಿಕಾರಿಗಳ ತಡೆಹಿಡಿದಿದ್ದಾರೆ. ಸರಬ್ಜಿತ್ ಸಿಂಗ್‌ರನ್ನು ನೋಡಲು ಕೇವಲ ಒಂದು ಬಾರಿ ಮಾತ್ರ ಅವಕಾಶ ನೀಡಲಾಗಿದ್ದು, ಶುಕ್ರವಾರ ಭಾರತದ ಅಧಿಕಾರಿಗಳು ಅವರ ಆರೋಗ್ಯ ವಿಚಾರಿಸಿ ಹೋಗಿದ್ದಾರೆ. ಹೀಗಾಗಿ ಮತ್ತೆ ಸರಬ್ಜಿತ್ ಸಿಂಗ್‌ರನ್ನು ನೋಡಲು ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನದ ಅಧಿಕಾರಿಗಳು ಮತ್ತು ಜಿನ್ನಾ ಆಸ್ಪತ್ರೆಯ ವೈದ್ಯರು ಸ್ಪಷ್ಟ ಪಡಿಸಿದ್ದಾರೆ.

ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಮೇಲೆ ಕಳೆದ ಶುಕ್ರವಾರ ಲಾಹೋರ್‌ನ ಕೋಟ್ ಲಕಪತ್ ಜೈಲಿನ ಸಹ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಹಲ್ಲೆಗೊಳಗಾಗಿರುವ ಸರಬ್ಜಿತ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಸಮೀಪದ ಜಿನ್ನಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಸರಬ್ಜಿತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರಬ್ಜಿತ್ ಮೇಲೆ ಹಲ್ಲೆಯಾದ ವಿಚಾರ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾಗಿದ್ದ ಕುಟುಂಬದ ಸದಸ್ಯರು, ಸರಬ್ಜಿತ್‌ರನ್ನು ನೋಡಲು ಅವಕಾಶ ಮಾಡಿಕೊಡುವಂತೆ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ವಿದೇಶಾಂಗ ರಾಜ್ಯ ಸಚಿವೆ ಪ್ರಣೀತ್ ಕೌರ್ ಅವರಿಗೆ ಮನವಿ ಮಾಡಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.