ಈಗಿನ ಸುದ್ದಿ

2ಜಿ: ಪಿಎಂ, ಎಫ್ಎಂ ಬಗ್ಗೆ ದಾಖಲೆ ಇಲ್ಲ: ಚಾಕೋ

2ಜಿ: ಪಿಎಂ, ಎಫ್ಎಂ ಬಗ್ಗೆ ದಾಖಲೆ ಇಲ್ಲ: ಚಾಕೋ
Published On :

ನವದೆಹಲಿ: 2ಜಿ ಹಗರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ವಿತ್ತ ಸಚಿವ ಪಿ.ಚಿದಂಬರಂ ಅವರು ಪಾಲ್ಗೊಂಡಿರುವ ಕುರಿತು ಯಾವುದೇ ಮಾಹಿತಿ ಮತ್ತು ದಾಖಲೆಗಳು ಲಭ್ಯವಾಗಿಲ್ಲ ಎಂದು ಜಂಟಿ ಸಂಸದೀಯ ಆಯೋಗ(ಜೆಪಿಸಿ) ದ ಅಧ್ಯಕ್ಷ ಪಿ.ಸಿ.ಚಾಕೋ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಜೆಪಿಸಿ ಅಧ್ಯಕ್ಷ ಚಾಕೋ ಅವರು, 2ಜಿ ಹಗರಣದಲ್ಲಿ ಪ್ರಧಾನಿ ಮತ್ತು ವಿತ್ತ ಸಚಿವರು ಭಾಗಿಯಾಗಿರುವ ಕುರಿತು ಅಥವಾ ಪರೋಕ್ಷವಾಗಿ ಅವರ ಹಸ್ತಕ್ಷೇಪವಿರುವ ಯಾವುದೇ ದಾಖಲೆಗಳೂ ಲಭ್ಯವಾಗಿಲ್ಲ ಎಂದು ತಿಳಿಸಿದರು.

ಸಾಕ್ಷಿಗಳ ಹೇಳಿಕೆ ಮತ್ತು ಅದರಲ್ಲಿ ಬಹಿರಂಗವಾದ ಎಲ್ಲ ಅಂಶಗಳನ್ನು ನಾವು ಕೂಲಂಕುಷವಾಗಿ ಪರಿಶೀಲನೆ ಮಾಡಿಯೇ ಕೊನೆಯದಾಗಿ ಒಂದು ನಿರ್ಧಾರಕ್ಕೆ ಬಂದು ವರದಿ ನೀಡಿದ್ದೇವೆ. ನಮ್ಮ ಕೆಲಸದಲ್ಲಿ ನನಗೆ ಯಾವುದೇ ರೀತಿಯ ತಪ್ಪುಗಳು ಅಥವಾ ಅನೌಚಿತ್ಯಗಳು ಕಾಣಿಸುತ್ತಿಲ್ಲ. ತಮ್ಮ ವರದಿ ಸತ್ಯದಿಂದ ಕೂಡಿದ್ದು, ನಿಷ್ಪಕ್ಷಪಾತ ವರದಿಯಾಗಿದೆ ಎಂದು ಚಾಕೋ ಹೇಳಿದರು.

2ಜಿ ಹಗರಣದ ಕುರಿತು ಚಾಕೋ ನೇತೃತ್ವದ ಆಯೋಗ ನೀಡಿರುವ ವರದಿ ಇದೀಗ ವಿವಾದಕ್ಕೆ ಕಾರಣವಾಗಿದೆ. ಚಾಕೋ ನೇತೃತ್ವದ ಜೆಪಿಸಿ ನೀಡಿರುವ ವರದಿಯಲ್ಲಿ ಪ್ರಧಾನಿ ಮತ್ತು ಚಿದಂಬರಂ ಅವರಿಗೆ ಕ್ಲೀನ್ ಚಿಟ್ ದೊರೆತಿತ್ತು. ಅಲ್ಲದೆ ಎ.ರಾಜಾ ಅವರು 2ಜಿ ಸಂಬಂಧ ಪಟ್ಟ ವಿಚಾರಗಳಲ್ಲಿ ಪ್ರಧಾನಿ ಮತ್ತು ಚಿದಂಬರಂ ಅವರ ಅಭಿಪ್ರಾಯವಿಲ್ಲದೆ ತಮ್ಮ ಇಚ್ಛೆಗನುಸಾರವಾಗಿ ನಡೆದುಕೊಂಡಿದ್ದರು. 2ಜಿ ಪರವಾನಗಿ ಹಂಚಿಕೆಯಲ್ಲಿಯೂ ರಾಜಾ ಪ್ರಧಾನಿಗಳನ್ನು ಸಂಪರ್ಕಿಸಿರಲಿಲ್ಲ ಎಂದು ಚಾಕೋ ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದರು.

ಜೆಪಿಸಿ ವರದಿಯಲ್ಲಿ ಪ್ರಧಾನಿ ಮತ್ತು ವಿತ್ತ ಸಚಿವರಿಗೆ ಕ್ಲೀನ್ ಚಿಟ್ ನೀಡಿರುವುದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಯಿತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಜಾ ಅವರೇ 2ಜಿ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮತ್ತು ವಿತ್ತ ಸಚಿವರನ್ನು ಸಂಪರ್ಕಿಸಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೆ ಎಂದು ಈ ಹಿಂದೆ ಹೇಳಿದ್ದರು. ಇದನ್ನೇ ಸಾಕ್ಷಿಯಾಗಿ ಪರಿಗಣಿಸಬೇಕು ಎಂದಿದ್ದ ವಿಪಕ್ಷಗಳು ಪ್ರಧಾನಿ ಮತ್ತು ಚಿದಂಬರಂ ಅವರ ರಾಜಿನಾಮೆಗೆ ಅಗ್ರಹಿಸಿದ್ದವು. ಅಲ್ಲದೆ ಪಕ್ಷಪಾತ ವರದಿ ನೀಡಿರುವ ಜೆಪಿಸಿ ಅಧ್ಯಕ್ಷ ಚಾಕೋ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.