ಕೈ ಪರ ಚಿರಂಜೀವಿ ಮತ್ತು ರಮ್ಯಾ ಪ್ರಚಾರ
ದೊಡ್ಡಬಳ್ಳಾಪುರ: ಕೇಂದ್ರ ಸಚಿವ ಮತ್ತು ನಟ ಚಿರಂಜೀವಿ ಅವರು ಭಾನುವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರು.
ಇಂದು ಗೌರಿಬಿದನೂರಿಗೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಚಿರಂಜೀವಿ ಅವರು ನೆರೆದಿದ್ದ ಸಾವಿರಾರು ಅಭಿಮಾನಿಗಳತ್ತ ಕೈ ಬೀಸುತ್ತ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಗೌರಿಬಿದನೂರಿನ ಕಾಂಗ್ರೆಸ್ ಅಭ್ಯರ್ಥಿ ಶಿವಶಂಕರ್ ರೆಡ್ಡಿ ಪರ ಮತಯಾಚನೆ ಮಾಡಿದ ಚಿರಂಜೀವಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದರು.
ಜೆಡಿಎಸ್ ಅಪ್ಪ ಮಕ್ಕಳ ಪಕ್ಷವಾಗಿದ್ದು, ಅಧಿಕಾರವೆನ್ನುವುದು ಅಲ್ಲಿ ಒಂದು ಕುಟುಂಬಕ್ಕೆ ಸೀಮಿತವಾಗಿರುತ್ತದೆ. ಅಂತೆಯೇ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗೆ ಜನತೆ ಈ ಬಾರಿ ಸರಿಯಾದ ಪಾಠ ಕಲಿಸುವ ಅನಿವಾರ್ಯತೆ ಇದೆ. ಬಿಜೆಪಿ 22 ಶಾಸಕರು ಭ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿರುವುದು ದಾಖಲೆಯೇ ಸರಿ. ನಾನಂತೂ ಇದೂವರೆಗೂ ಇಂತಹ ಭ್ರಷ್ಟಾಚಾರ ಸರ್ಕಾರವನ್ನು ನೋಡಿಯೇ ಇಲ್ಲ ಎಂದು ಅವರು ಹೇಳಿದರು.
ಅಕ್ರಣ ಗಣಿಗಾರಿಕೆಯಿಂದಾಗಿ ಜೈಲು ಸೇರಿರುವ ಗಾಲಿ ಜನಾರ್ಧನರೆಡ್ಡಿ ಅವರು ಭ್ರಷ್ಟಾಚಾರ ದತ್ತುಪುತ್ರ ಎಂದು ಟೀಕಿಸಿದ ಚಿರಂಜೀವಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತನೀಡಿ ಎಂದು ಕೇಳಿದರು. ನಾನು ಸಾಕಷ್ಟು ಬಾರಿ ಕರ್ನಾಟಕಕ್ಕೆ ಆಗಮಿಸಿದ್ದೇನೆ. ನನ್ನ ನೆಚ್ಚಿನ ಊರು ಬೆಂಗಳೂರು. ಆದರೆ ಈಗ ಇಲ್ಲಿಗೆ ಆಗಮಿಸ ಪ್ರತಿ ಬಾರಿಯೂ ಭ್ರಷ್ಟಾಚಾರದ ಸುದ್ದಿಗಳನ್ನೇ ಕೇಳುತ್ತಿದ್ದೇನೆ. ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಬಿಜೆಪಿ, ಅವರ ಬೆನ್ನನ್ನೇ ಮುರಿದು ಹಾಕಿದೆ. ಅವರಿಗೆ ಯಾವುದೇ ರೀತಿ ಸಬ್ಸಿಡಿಯಂತಹ ಸರ್ಕಾರಿ ಅನುಕೂಲಗಳು ದೊರೆಯುತ್ತಿಲ್ಲ ಎಂದು ಚಿರಂಜೀವಿ ಕಿಡಿಕಾರಿದರು.
ಅಂತೆಯೇ ತುಮಕೂರಿಗೆ ಆಗಮಿಸಿದ್ದ ಚಿರಂಜೀವಿ ಪಾವಗಡ ಮತ್ತು ಮಧುಗಿರಿಯಲ್ಲಿಯೂ ರೋಡ್ಶೋ ನಡೆಸಿದರು. ಪಾವಗಡದ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಮತ್ತು ಮಧುಗಿರಿಯ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರ ಪರ ಮತಯಾಚನೆ ಮಾಡಿದರು. ನಟ ಚಿರಂಜೀವಿ ಆಗಮಿಸುವ ವಿಷಯ ತಿಳಿದ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಅವರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಚಿರಂಜೀವಿ ಅವರಿಗೆ ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಸಾಥ್ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

