ಸರಬ್ಜಿತ್ ಬದುಕುಳಿಯುವ ಸಾಧ್ಯತೆ ಕಡಿಮೆ: ವೈದ್ಯರು

ಲಾಹೋರ್: ಪಾಕಿಸ್ತಾನ ಜೈಲಿನಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿರುವ ಭಾರತೀಯ ಮೂಲದ ಖೈದಿ ಸರಬ್ಜಿತ್ ಆರೋಗ್ಯ ಸ್ಥಿತಿ ವಿಷಮಿಸಿದ್ದು, ಅವರು ಬದುಕುಳಿಯುವ ಸಾಧ್ಯತೆ ಕ್ಷೀಣಿಸುತ್ತಿದೆ ಎಂದು ಜಿನ್ನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಲಾಹೋರ್ನ ಕೋಟ್ ಲಕಪತ್ ಜೈಲಿನಲ್ಲಿರುವ ಸರಬ್ಜಿತ್ ಸಿಂಗ್ ಅವರ ಮೇಲೆ ಕಳೆದ ಶುಕ್ರವಾರ ಸಹಖೈದಿಗಳು ನಡೆಸಿದ್ದ ಹಲ್ಲೆಯಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸರಬ್ಜಿತ್ ರನ್ನು ಲಾಹೋರ್ನ ಜಿನ್ನಾ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಸರಬ್ಜಿತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ವೈಧ್ಯರು, ಸರಬ್ಜಿತ್ ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಿದ್ದಾರೆ.
49 ವರ್ಷದ ಭಾರತೀಯ ಮೂಲದ ಖೈದಿ ಸರಬ್ಜಿತ್ ಮೇಲೆ ಆಗಿರುವ ಮಾರಣಾಂತಿಕ ಹಲ್ಲೆಯಿಂದಾಗಿ ಅವರ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಲೆಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ಪ್ರಸ್ತುತ ಕೋಮಾ ಸ್ಥಿತಿ ತಲುಪಿರುವ ಅವರು ಬದುಕುಳಿಯುವ ಸಾಧ್ಯತೆ ಕ್ಷೀಣವಾಗುತ್ತಿದೆ. ತಲೆಯಲ್ಲಿನ ತೀವ್ರವಾದ ರಕ್ತ ಸ್ರಾವ ಅವರನ್ನು ಕೋಮಾ ಸ್ಥಿತಿಯಲ್ಲಿರುವಂತೆ ಮಾಡಿದೆ. ಅಲ್ಲದೆ ಅವರ ನರವ್ಯವಸ್ಥೆ ಬಹುತೇಕ ಹಾಳಾಗಿದ್ದು, ಅದರ ಪುನಶ್ಚೇತನ ಸಾಧ್ಯತೆ ಕಡಿಮೆ ಇದೆ ವೈದ್ಯರು ಹೇಳಿದ್ದಾರೆ.
ಸರಬ್ಜಿತ್ ಸಿಂಗ್ಗೆ ಜಿನ್ನಾ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪಾಕಿಸ್ತಾನಕ್ಕೆ ಆಗಮಿಸಿರುವ ಅವರ ಕುಟುಂಬ ಸದಸ್ಯರು ಲಾಹೋರ್ನ ಜಿನ್ನಾ ಆಸ್ಪತ್ರೆಗೆ ಭೇಟಿ ನೀಡಿ ಈಗಾಗಲೇ ಒಂದು ಬಾರಿ ಅವರ ಆರೋಗ್ಯ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಮೇಲೆ ಶುಕ್ರವಾರ ಲಾಹೋರ್ ಜೈಲಿನ ಸಹ ಖೈದಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಸರಬ್ಜಿತ್ ಅವರನ್ನು ಕೊಲ್ಲಲೆಂದೇ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಸರಬ್ಜಿತ್ ಸಹ ಖೈದಿಗಳಾದ ಅಮರ್ ಅಫ್ತಾಬ್ ಮತ್ತು ಮುಧಾಸರ್ ಎಂಬುವವರ ನೇತೃತ್ವದಲ್ಲಿ ಈ ಹಲ್ಲೆ ನಡೆದಿದೆ.
ಒಟ್ಟು ಆರು ಮಂದಿ ಖೈದಿಗಳು ಸರಬ್ಜಿತ್ ಮೇಲೆ ಇಟ್ಟಿಗೆ, ಬ್ಲೇಡು ಮತ್ತು ತುಪ್ಪದ ಡಬ್ಬದ ಹರಿತವಾದ ಭಾಗಗಳನ್ನು ಉಪಯೋಗಿಸಿ ಹಲ್ಲೆ ಮಾಡಿದ್ದಾರೆ. ಸದ್ಯ ಈ ಆರು ಮಂದಿ ಖೈದಿಗಳನ್ನು ಬೇರ್ಪಡಿಸಿ ಬೇರೆ ಬೇರೆ ಕೊಠಡಿಗಳಿಗೆ ವರ್ಗಾಯಿಸಲಾಗಿದೆ ಎಂದು ಕೋಟ್ ಲಕಪತ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಸರಬ್ಜಿತ್ ಮೇಲಿನ ಹಲ್ಲೆಗೆ ಭಾರತದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಪಾಕಿಸ್ತಾನದಲ್ಲಿಯೂ ಈ ಬಗ್ಗೆ ಖಂಡನೆ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


