ಈಗಿನ ಸುದ್ದಿ

ಸರಬ್ಜಿತ್ ಗಂಭೀರ: ಭಾರತದಲ್ಲಿ ಚಿಕಿತ್ಸೆ?

ಸರಬ್ಜಿತ್ ಗಂಭೀರ: ಭಾರತದಲ್ಲಿ ಚಿಕಿತ್ಸೆ?
Published On :

ನವದೆಹಲಿ: ಭಾರತೀಯ ಮೂಲದ ಪಾಕ್ ಖೈದಿ ಸರಬ್ಜಿತ್ ಸಿಂಗ್ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಅವರಿಗೆ ಭಾರತದಲ್ಲಿ ಚಿಕಿತ್ಸೆ ಕೊಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಕಳೆದ ಶುಕ್ರವಾರ ಲಾಹೋರ್‌ನ ಕೋಟ್ ಲಕಪತ್ ಜೈಲಿನಲ್ಲಿ ಸಹ ಖೈದಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ಭಾರತೀಯ ಸರಬ್ಜಿತ್ ಸಿಂಗ್, ಪ್ರಸ್ತುತ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದು, ದಿನೇ ದಿನೇ ಅವರು ಬದುಕುಳಿಯುವ ಸಾಧ್ಯತೆ ಕ್ಷೀಣವಾಗುತ್ತಿದೆ. ಈ ಬಗ್ಗೆ ನಿನ್ನೆ ಜಿನ್ನಾ ಆಸ್ಪತ್ರೆಯ ವೈದ್ಯರು ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸರಬ್ಜಿತ್‌ರನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕಳುಹಿಸಿ ಕೊಡುವಂತೆ ಪಾಕಿಸ್ತಾನದ ಬಳಿ ಮನವಿ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ.

'ಸರಬ್ಜಿತ್ ಅವರಿಗೆ ನಿಜಕ್ಕೂ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದರೆ ಬೇರೆ ದೇಶಗಳಿಗೆ ರವಾನಿಸುವ ಬದಲು ಭಾರತಕ್ಕೆ ಕಳುಹಿಸಿಕೊಡಿ. ಇಲ್ಲಿ ಸಾಕಷ್ಟು ನುರಿತ ವೈದ್ಯರು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ವೈದ್ಯರಿದ್ದಾರೆ. ಅವರಿಂದ ಸರಬ್ಜಿತ್‌ಗೆ ಚಿಕಿತ್ಸೆ ಕೊಡಿಸುತ್ತೇವೆ' ಎಂದು ಭಾರತ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಪಾಕ್ ಸರ್ಕಾರದ ಬಳಿ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಲ್ಲೆಗೊಳಗಾಗಿರುವ ಸರಬ್ಜಿತ್‌ಸಿಂಗ್‌ರನ್ನು ನೋಡಲು ನಿನ್ನೆ ಲಾಹೋರ್‌ಗೆ ಹೊರಟಿದ್ದ ಅವರ ಕುಟುಂಬ ಸದಸ್ಯರು ಇಂದು ಬೆಳಗ್ಗೆ ಸರಬ್ಜಿತ್ ಅವರನ್ನು ನೋಡಿ ಬಂದಿದ್ದಾರೆ. ಅಲ್ಲದೆ ಆಸ್ಪತ್ರೆಯ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಬ್ಜಿತ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ದಯವಿಟ್ಟು ಅವರನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕಳುಹಿಸಿಕೊಡಿ. ಭಾರತ ಸರ್ಕಾರ ಸರಬ್ಜಿತ್ ಅವರನ್ನು ಶೀಘ್ರವೇ ಭಾರತಕ್ಕೆ ಕರೆಸಿಕೊಳ್ಳಬೇಕು ಎಂದು ಸರಬ್ಜಿತ್ ಸಹೋದರಿ ದಲಬೀರ್ ಖೌರ್ ಅವರು ಉಭಯ ರಾಷ್ಟ್ರಗಳ ನಾಯಕರನ್ನು ಆಗ್ರಹಿಸಿದ್ದಾರೆ.

ಆದರೆ ಈ ಬಗ್ಗೆ ಪಾಕ್ ಸರ್ಕಾರ ಮಾತ್ರ ತನ್ನ ನಕಾರಾತ್ಮಕ ಪ್ರತಿಕ್ರಿಯೆ ಮುಂದುವರೆಸಿದ್ದು, ಸರಬ್ಜಿತ್ ಅವರಿಗೆ ಪಾಕಿಸ್ತಾನದಲ್ಲಿಯೇ ಚಿಕಿತ್ಸೆ ಕೊಡಿಸುವುದಾಗಿ ತನ್ನ ಮೊಂಡುವಾದವನ್ನು ಮುಂದಿಟ್ಟಿದೆ. ಆದರೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತ ಸರ್ಕಾರ ಇದಕ್ಕಾಗಿ ಪಾಕ್ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಚರ್ಚಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.