ಜ್ಯಾತ್ಯಾತೀತ ಪದ ಹೇಳುವ ನೈತಿಕತೆ ಇಲ್ಲ: ಗೌಡರ ವಿರುದ್ಧ ಸಿದ್ದು ಕಿಡಿ

ಬೆಂಗಳೂರು: ಜೆಡಿಎಸ್ಗೆ ಜ್ಯಾತ್ಯಾತೀತ ಪದ ಬಳಸುವ ನೈತಿಕತೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದಾರೆ.
ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟಗೊಂಡ ದೇವೇಗೌಡರ ಸಂದರ್ಶನದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಿದ್ಧರಾಮಯ್ಯ ಅವರು ನೇರವಾಗಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 'ಜ್ಯಾತ್ಯಾತೀತರೆನ್ನುವ ಜೆಡಿಎಸ್ ಪಕ್ಷದವರು ಕೋಮುವಾದಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಹೀಗಾಗಿ ಅವರಿಗೆ ಜ್ಯಾತ್ಯಾತೀತ ಪದ ಬಳಸುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
'ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ಗೆ ಜ್ಯಾತ್ಯಾತೀತ ಪದ ಬಳಸುವ ನೈತಿಕತೆಯೇ ಇಲ್ಲ. ಕುಟುಂಬ ರಾಜಕಾರಣದಲ್ಲಿ ಜೆಡಿಎಸ್ ಪಕ್ಷವೇ ನಂಬರ್ 1. ತಾವು ಜ್ಯಾತ್ಯಾತೀರೆನ್ನುವ ಜೆಡಿಎಸ್ ಪಕ್ಷದವರು ಕೋಮುವಾದಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ. ಪ್ರತಿ ಚುನಾವಣೆಯಲ್ಲಿಯೂ ಇದೇ ನಡೆಯುತ್ತದೆ. ಹಿಂದೆ ಬಿಜೆಪಿಯವರು ಜೆಡಿಎಸ್ ತಮ್ಮ ಬೆನ್ನಿಗೆ ಚೂರಿ ಹಾಕಿತು ಎಂದು ಬೊಬ್ಬೆ ಹೊಡೆಯುತ್ತಿದ್ದರು. ಇದೀಗ ಅವರೊಂದಿಗೆಯೇ ಮೈತ್ರಿ ಮಾಡಿಕೊಂಡು ತಮ್ಮ ಅಭ್ಯರ್ಥಿಗಳ ನಾಮಪತ್ರಗಳನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ' ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ವಿರುದ್ಧವೂ ಹರಿಹಾಯ್ದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ನಾಲ್ಕು ವರ್ಷಗಳ ಕಾಲ ಸಂಸದರಾಗಿದ್ದರು. ಸಂಸತ್ಗೆ ಅತೀ ಕಡಿಮೆ ಹಾಜರಿಯಾದ ಏಕೈಕ ಕನ್ನಡಿಗ ಎಂದು ಲೇವಡಿ ಮಾಡಿದರು. ಅಲ್ಲದೆ ತಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದು ತಾವೇ ಎನ್ನುವ ದೇವೇಗೌಡರು, ಅವರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸಿಗರು ಎನ್ನುವುದನ್ನು ಮಾತ್ರ ಎಲ್ಲಿಯೂ ಹೇಳುವುದಿಲ್ಲ. ತಮಗೆ ನೆರವು ನೀಡಿದವರನ್ನು ನೆನೆಸಿಕೊಳ್ಳದೇ ಅಭಿವೃದ್ಧಿ ಕೊಳ್ಳಿ ಇಡುತ್ತಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಈಗಾಗಲೇ ಬಿಜೆಪಿ ನಾಯಕರು ಜೈಲು ವಾಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಕರು ಜೈಲಿಗೆ ಹೋಗಲಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಒಟ್ಟಾರೆ ಸಿದ್ದು ಮತ್ತು ಗೌಡರ ಕುಟುಂಬದ ನಡುವಿನ ವಾಕ್ಸಮರ ಇಂದೂ ಮುಂದುವರೆದಿದ್ದು, ಸಿದ್ದು ವಾಗ್ದಾಳಿಗೆ ಗೌಡರು ಹೇಗೆ ತಿರುಗೇಟು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


