ಕಾರ್ಗಿಲ್‌ನಲ್ಲಿ ಗುಂಡಿನ ದಾಳಿ
ಶ್ರೀನಗರ: ಮತ್ತೆ ಮತ್ತೆ ಪಾಕಿಸ್ತಾನ ಸೈನಿಕರು ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದು, ಈ ಬಾರಿ ಕಾರ್ಗಿಲ್‌ನಲ್ಲಿ ಭಾರತೀಯ ಯೋಧರತ್ತ ಗುಂಡಿನ ದಾಳಿ ನಡೆಸಿದ್ದಾರೆ.
14 ವರ್ಷಗಳ ಹಿಂದೆ ಕಾರ್ಗಿಲ್ ಅನ್ನು ಅತಿಕ್ರಮಿಸಿದ್ದ ಪಾಕ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದ ಭಾರತೀಯ ಯೋಧರು ವಿಜಯ ಪತಾಕೆ ಹಾರಿಸಿದ್ದರು. ಇದೀಗ ಮತ್ತೆ ಪಾಕಿಸ್ತಾನ ಕಾರ್ಗಿಲ್‌ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ.
ಕಾರ್ಗಿಲ್‌ನ ಡ್ರಾಸ್ ಮತ್ತು ಕಕ್ಸರ್ ಪ್ರದೇಶದಲ್ಲಿ ಸ್ವಯಂ ಚಾಲಿತ ಮಿಷನ್‌ಗನ್ ಮತ್ತು ಎಕೆ 56 ಬಂದೂಕುಗಳ ಮೂಲಕ ದಾಳಿ ನಡೆಸಿರುವ ಪಾಕಿಸ್ತಾನ ಮತ್ತೆ ಕಾರ್ಗಿಲ್‌ನಲ್ಲಿ ಶಾಂತಿ ಕದಡಲು ಪ್ರಯತ್ನಿಸಿದೆ. ಪಾಕ್ ದಾಳಿಗೆ ಪ್ರತ್ತ್ಯುತ್ತರ ನೀಡಿರುವ ಭಾರತೀಯ ಯೋಧರು, ಪಾಕ್ ಯೋಧರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಮೊದಲು ಸಣ್ಣ ಗನ್‌ನಿಂದ ದಾಳಿ ಮಾಡಿದ ಪಾಕಿಸ್ತಾನ ಸೈನಿಕರು ಭಾರತ ಪ್ರತಿ ದಾಳಿ ನಡೆಸುತ್ತಿದ್ದಂತೆಯೇ ಸ್ವಯಂ ಚಾಲಿತ ಬಂದೂಕಿನಿಂದ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಗಡಿಗೆ ಸೇರಿದ್ದ ಕಾರ್ಗಿಲ್ ಪ್ರದೇಶವನ್ನು ಪಾಕಿಸ್ತಾನಿ ಸೈನಿಕರು ಅತಿಕ್ರಮಿಸಿದ್ದರು. ಅಲ್ಲದೆ 1999ರಲ್ಲಿ ಭಾರತೀಯ ಯೋಧ ಲೆಫ್ಟಿನೆಂಟ್ ಸೌರಭ್ ಖಾಲಿಯಾ ಮತ್ತು ಅವರ ತಂಡವನ್ನು ಅಪಹರಿಸಿದ್ದ ಪಾಕ್ ಸೈನಿಕರು, ಅವರಿಗೆ ಚಿತ್ರ ಹಿಂಸೆ ನೀಡಿ ಇದೇ ಪ್ರದೇಶದಲ್ಲಿ ಕೊಂದು ಹಾಕಿದ್ದರು. ಪಾಕ್ ಅತಿಕ್ರಮವನ್ನು ತಡವಾಗಿ ತಿಳಿದ ಭಾರತ ಸರ್ಕಾರ 1999ರಲ್ಲಿ ಆಪರೇಷನ್ ವಿಜಯ್ ಹೆಸರಲ್ಲಿ ಕಾರ್ಗಿಲ್ ಕಾರ್ಯಚರಣೆಯನ್ನು ನಡೆಸಿತ್ತು.
ಅಂದು ನಡೆದ ಯುದ್ಧದಲ್ಲಿ ಭಾರತೀಯ ಸೈನಿಕರು ಪಾಕ್ ಪಡೆಗಳನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದವು. ಅಂದಿನಿಂದ ಇಲ್ಲಿಯವರೆಗೂ ಕಾರ್ಗಿಲ್ ಸೆಕ್ಟರ್‌ನಲ್ಲಿ ಯಾವುದೇ ರೀತಿಯ ಕದನ ವಿರಾಮ ಉಲ್ಲಂಘನೆ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಇಂದು ಮತ್ತೆ ಪಾಕ್ ಸೈನಿಕರು ಕಾರ್ಗಿಲ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ ಯೋಧರು ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದು, ಈ ಹಿಂದೆ ಪೂಂಛ್‌ನ ಚಕನ್ ದ ಬಾಗ್ ಮಿಲಿಟರಿ ವಲಯದಲ್ಲಿ ಪಾಕಿಸ್ತಾನಿ ಸೈನಿಕರು ಐವರು ಭಾರತೀಯ ಯೋಧರನ್ನು ಗುಂಡಿಟ್ಟು ಕೊಂದಿದ್ದರು. ಇದಾದ ಬಳಿಕ ಇದೇ ಪೂಂಛ್‌ನ ದುರ್ಗಾ ವಲಯದಲ್ಲಿ ಪಾಕ್ ಸೈನಿಕರು ನಡೆಸಿದ್ದ ಶೆಲ್ ದಾಳಿಯಿಂದಾಗಿ ಸ್ಥಳೀಯ ನಾಗರೀಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

