ಧಾರ್ಮಿಕ ನಾಯಕನ ಮಗನ ಹತ್ಯೆ, ಕೈರೋದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ

ಕೈರೋ: ಈಜಿಪ್ಟ್ ರಾಜಧಾನಿ ಕೈರೋದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಶನಿವಾರ ಮುಸ್ಲಿಂ ಧಾರ್ಮಿಕ ಮುಖಂಡನ ಮಗ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈಜಿಪ್ಟ್ ಅಧ್ಯಕ್ಷ ಮಹಮದ್ ಮೋರ್ಸಿ ಅವರನ್ನು ಬೆಂಬಲಿಸಿ ಮುಸ್ಲಿಂ ಬ್ರದರ್ ಹುಡ್ ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ, ಕೈರೋದಲ್ಲ್ಲಿ ಇದುವರೆವಿಗೂ ಸುಮಾರು 83 ಮಂದಿ ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ಸೈನಿಕರು ಬಂಧಿಸಿದ್ದಾರೆ. ಈ ನಡುವೆ ಇಂದು ಮುಸ್ಲಿಂ ಬ್ರದರ್ ಹುಡ್ನ ಧಾರ್ಮಿಕ ಮುಖಂಡನೋರ್ವನ ಮಗನ ಹತ್ಯೆಯಾಗಿದ್ದು, ಪಕ್ಷದ ಕಾರ್ಯಕರ್ತರು ಮತ್ತೆ ರಾಜಧಾನಿ ಕೈರೋದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲು ಮುಂದಾಗಿದ್ದಾರೆ.
ಮುಸ್ಲಿಂ ಬ್ರದರ್ ಹುಡ್ ಕಾರ್ಯಕರ್ತರ ರ್ಯಾಲಿ ವಿಚಾರ ತಿಳಿದ ಈಜಿಪ್ಟ್ ಸೈನಿಕರು, ಕಾರ್ಯಕರ್ತರು ಸಭೆ ಸೇರಿರುವ ಕೈರೋದ ಅಲ್ ಫಥ್ ಮಸೀದಿಯನ್ನು ಸುತ್ತುವರೆದಿದ್ದಾರೆ. ಅಲ್ಲದೆ ಮಸೀದಿಗೆ ದಿಗ್ಭಂಧನ ಹೇರುವ ಮೂಲಕ ಕಾರ್ಯಕರ್ತರನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಸಶಸ್ತ್ರ ಸಜ್ಜಿತ ನೂರಾರು ಸೈನಿಕರು ಮಸೀದಿಯನ್ನು ಸುತ್ತುವರೆದಿದ್ದು, ಮಸೀದಿಯ ಪ್ರಮುಖ ದ್ವಾರವನ್ನು ಮುಚ್ಚಿದ್ದಾರೆ.
ಅಲ್ಲದೆ ಕೈರೋದ ಮುಸ್ಲಿಂ ಬ್ರದರ್ ಹುಡ್ ಕಾರ್ಯಕರ್ತರ ಮನೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿರುವ ಸೈನಿಕರು, ಮನೆಗಳಲ್ಲಿ ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಸ್ಲಿಂ ಬ್ರದರ್ ಹುಡ್ ಕಾರ್ಯಕರ್ತರು, ಮಿಲಿಟರಿ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ. ಮಸೀದಿಯಲ್ಲಿ ನಮ್ಮ ನೂರಾರು ಸಂಬಂಧಿಕರು ಮತ್ತು ಸ್ನೇಹಿತರಿದ್ದು, ಅವರನ್ನು ಸೈನಿಕರು ಬಂಧನದಲ್ಲಿಟ್ಟುಕೊಂಡಿದ್ದಾರೆ. ಅವರಿಗೆ ಸೈನಿಕರಿಂದ ಪ್ರಾಣಾಪಾಯವಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ಅಧ್ಯಕ್ಷ ಮಹಮದ್ ಮೋರ್ಸಿ ಬೆಂಬಲಿಗರು ಮತ್ತು ಸೈನಿಕರ ಮಧ್ಯೆ ನಡೆಯುತ್ತಿರುವ ಘರ್ಷಣೆ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ನಡುವೆ ದೇಶದಲ್ಲಿ ಸೃಷ್ಟಿಯಾಗಿರುವ ಹಿಂಸಾಚಾರವನ್ನು ನಿಲ್ಲಿಸುವಂತೆ ಈಜಿಪ್ಟ್ ನಾಗರೀಕರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


