ಮತ್ತೆ 1991ರ ಸ್ಥಿತಿ ನಿರ್ಮಾಣವಾಗಲ್ಲ: ಪ್ರಧಾನಿ ಸಿಂಗ್ ವಿಶ್ವಾಸ

ನವದೆಹಲಿ: ಮತ್ತೆ ದೇಶದಲ್ಲಿ 1991ರ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವದೆಹಲಿಯ ತಮ್ಮ ನಿವಾಸದಲ್ಲಿ ನಡೆದ ಆರ್‌ಬಿಐ ಇತಿಹಾಸ ಕುರಿತ ಪುಸ್ತಕ(RBI History-Looking Back and Looking Ahead)ದ ನಾಲ್ಕನೇ ಸಂಪುಟವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮನಮೋಹನ್ ಸಿಂಗ್ ಅವರು, ರುಪಾಯಿ ಮೌಲ್ಯ ಮತ್ತು ಸೆನ್ಸೆಕ್ಸ್ ಭಾರಿ ಕುಸಿತದಿಂದ ಮಾರುಕಟ್ಟೆಯಲ್ಲಿ ಉಂಟಾಗಿರುವ ಆತಂಕದ ಕುರಿತು ಮಾತನಾಡಿದರು. 'ಪ್ರಸಕ್ತ ಮಾರುಕಟ್ಟೆಯ ಬೆಳವಣಿಗೆಗಳು ನಿರಾಶದಾಯಕವಾಗಿರಬಹುದು. ಆದರೆ ಮತ್ತೆ ದೇಶದಲ್ಲಿ 1991ರ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಅಂದಿನ ಪರಿಸ್ಥಿತಿಗು ಇಂದಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ಕೇವಲ 15 ದಿನಗಳಿಗಾಗುವಷ್ಟು ಮಾತ್ರ ವಿದೇಶಿ ವಿನಿಮಯದ ಠೇವಣಿ ಇತ್ತು'.
ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, 6ರಿಂದ 7 ತಿಂಗಳಿಗಾಗುವಷ್ಟು ವಿದೇಶಿ ವಿನಿಮಯ ಠೇವಣೆಯನ್ನು ನಾವು ಹೊಂದಿದ್ದೇವೆ. ಹೀಗಾಗಿ ಮಾರುಕಟ್ಟೆಯ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಅಂತೆಯೇ ಮಾರುಕಟ್ಟೆಯ ಪ್ರಸಕ್ತ ವಿದ್ಯಮಾನಗಳ ಕುರಿತು ಆತಂಕ ವ್ಯಕ್ತಪಡಿಸಿದ ಪ್ರಧಾನಿ ಮನಮೋಹನ್ ಸಿಂಗ್ ಅವರು, ಕೆಲವು ವಿಭಾಗಗಳಲ್ಲಿ ನಾವು ಆತಂಕ ಎದುರಿಸುತ್ತಿರುವುದು ನಿಜ. ಅಂತಹ ಕೆಲವು ಅಂಶಗಳು ನನ್ನ ಗಮನಕ್ಕೂ ಬಂದಿದೆ. ಷೇರುಮಾರುಕಟ್ಟೆಯಲ್ಲಿ ಬಂಡವಾಳ ತೊಡಗಿಸುತ್ತಿದ್ದ ಹೂಡಿಕೆದಾರರು, ಇದೀಗ ಸುರಕ್ಷತಾ ಮಾರ್ಗವಾಗಿ ಚಿನ್ನದ ಮೇಲೆ ಭಾರಿ ಪ್ರಮಾಣದ ಬಂಡವಾಳ ಹೂಡುತ್ತಿದ್ದಾರೆ. ಇದರಿಂದ ಬೇರೆ ವಿಭಾಗಗಳು ಬಂಡಾವಾಳವಿಲ್ಲದೆ ಸೊರಗುತ್ತಿವೆ. ಇಂತಹ ಬೆಳವಣಿಗೆಯ ಕುರಿತು ಸರ್ಕಾರ ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು.
ಒಟ್ಟಾರೆ ಸೆನ್ಸೆಕ್ಸ್ ಮತ್ತು ರುಪಾಯಿ ಮೌಲ್ಯದಲ್ಲಿ ಉಂಟಾದ ಭಾರಿ ಕುಸಿತ ಷೇರು ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇತ್ತೀಚೆಗೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಕೂಡ ಗಗನದತ್ತ ಮುಖ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


