ಈಗಿನ ಸುದ್ದಿ

'ರಾಯಲ ತೆಲಂಗಾಣ' ಅಸಂಬದ್ಧ, ಅಸಾಧ್ಯ: ಜಗನ್

'ರಾಯಲ ತೆಲಂಗಾಣ' ಅಸಂಬದ್ಧ, ಅಸಾಧ್ಯ: ಜಗನ್
Published On :

ಚಿತ್ತೂರು: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿಚ್ಛಿಸಿರುವ ನೂತನ ನಿರ್ಧಾರಕ್ಕೆ ಟಿಆರ್ಎಸ್ ಸೇರಿದಂತೆ ಆಂಧ್ರಪ್ರದೇಶದ ಪ್ರಮುಖ ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿರುವ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು, ಸರ್ಕಾರದ ಈ ನಿರ್ಧಾರ ಅಸಂಬದ್ಧವಾಗಿದ್ದು, ಇದು ಸಾಧ್ಯವಿಲ್ಲದ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಪ್ರಸ್ತುತ ರಾಯಲ ಸೀಮೆಯಲ್ಲಿರುವ ಎಲ್ಲ ಜಿಲ್ಲೆಗಳನ್ನು ಸೇರಿಸಿ ಒಂದು ರಾಜ್ಯ ರಚಿಸಿದರೆ ಅದನ್ನು ನಾವು ಒಪ್ಪಿಕೊಳ್ಳಬಹುದು ಆದರೆ ರಾಯಲ ಸೀಮೆಯನ್ನು ಇಬ್ಭಾಗ ಮಾಡಲು ನಾವು ಬಿಡುವುದಿಲ್ಲ ಎಂದು ಜಗನ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಕೇಂದ್ರ ಸರ್ಕಾರದ ಈ ಸಂಚಿನ ಹಿಂದೆ ಸೋನಿಯಾ ಗಾಂಧಿ ಅವರ ಕೈವಾಡವಿದ್ದು, ದೆಹಲಿ ನಾಯಕರು ಏನೇ ಮಾಡಿದರು ಜನತೆ ಅದನ್ನು ನೋಡುತ್ತಾ ಕುಳಿತಿರುತ್ತಾರೆ ಎನ್ನವುದು ಅವರ ಮೂರ್ಖತನ ಎಂದು ಜಗನ್ ಕಿಡಿಕಾರಿದ್ದಾರೆ.

ಈ ಹಿಂದೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಕೇಂದ್ರ ಸರ್ಕಾರ ರಚನೆ ಮಾಡಿದ್ದ ಸಚಿವರ ಉನ್ನತ ಸಚಿವರ ತಂಡವು ಆಂಧ್ರಪ್ರದೇಶಕ್ಕೆ ಕಲಂ 370-ಡಿ ಅನ್ವಯ ವಿಶೇಷ ಸ್ಥಾನಮಾನ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅಲ್ಲದೆ ಈಗ ರಾಯಲಸೀಮೆ ಪ್ರಾಂತ್ಯಕ್ಕೆ ಸೇರಿರುವ ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳನ್ನು ತೆಲಂಗಾಣಕ್ಕೆ ಸೇರಿಸುವಂತೆ ಸಚಿವರ ತಂಡ ಶಿಫಾರಸ್ಸು ಮಾಡಿದೆ.

ಆದರೆ ಕೇಂದ್ರದ ಉನ್ನತ ಸಚಿವರ ತಂಡದ ಶಿಫಾರಸ್ಸಿಗೆ ತೆಲಂಗಾಣ ಭಾಗದಲ್ಲಿಯೇ ತೀವ್ರ ವಿರೋಧ ಕೇಳಿ ಬರುತ್ತಿದ್ದು, ಟಿಆರ್ಎಸ್ ಪಕ್ಷದ ನಾಯಕ ಕೆ.ಚಂದ್ರಶೇಖರ ರಾವ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಈ ನಿರ್ಧಾರದಿಂದ ತೆಲಂಗಾಣ ರಾಜ್ಯ ರಚನೆ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಭವಾಗಿಸಲಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ರಾಯಲಸೀಮೆಯ ಜಿಲ್ಲೆಗಳನ್ನು ತೆಲಂಗಾಣಕ್ಕೆ ಸೇರಿಸಿಕೊಳ್ಳುವ ಮೂಲಕ ಅಲ್ಲಿನ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಲು ನಮಗಿಷ್ಟವಿಲ್ಲ ಎಂದು ಅವರು ಹೇಳಿದ್ದಾರೆ.

ನೂತನ ಶಿಫಾರಸ್ಸಿನ ಹಿಂದೆ ಸೋನಿಯಾ 'ಕೈ' ವಾಡ

ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮತ್ತೊಂದು ಪ್ರಮುಖ ಅಂಶವೆಂದರೆ ತೆಲಂಗಾಣ ರಾಜ್ಯ ರಚನೆ ಪ್ರಕ್ರಿಯೆಲ್ಲಿನ ನೂತನ ನಿರ್ಧಾರದ ಹಿಂದೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈವಾಡವಿದ್ದು, ರಾಯಲ ಸೀಮೆ ಪ್ರಾಂತ್ಯದ ತಮ್ಮ ಪ್ರಮುಖ ಎದುರಾಳಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಬಲವನ್ನು ಕುಂದಿಸಲು ಸೋನಿಯಾ ಮುಂದಾಗಿದ್ದಾರೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ರಾಯಲಸೀಮೆಯ ಪ್ರಾಂತ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷವೇ ಪ್ರಮುಖ ಪಕ್ಷವಾಗಿತ್ತು. ಆಗ ರಾಯಲಸೀಮೆಯನ್ನು ಪ್ರತಿನಿಧಿಸುತ್ತಿದ್ದ ವೈಎಸ್ ರಾಜಶೇಖರ ರೆಡ್ಡಿ ಅವರು ತಮ್ಮ ಪ್ರಭಾವಿ ವರ್ಚಸ್ಸಿನಿಂದ ಮುಖ್ಯಮಂತ್ರಿಯಾಗಿದ್ದರು. ಆದರೆ ಅವರ ಮರಣಾನಂತರ ಆಂಧ್ರಪ್ರದೇಶ ರಾಜಕೀಯದಲ್ಲಿ ಉಂಟಾದ ನಾಟಕೀಯ ಬೆಳವಣಿಗೆಗಳಿಂದಾಗಿ ಅವರ ಮಗ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು.

ಅಲ್ಲದೆ ಇತ್ತೀಚೆಗೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲೂ ಕೂಡ ಅವರ ಪಕ್ಷ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿ ರಾಯಲಸೀಮೆಯ ಎಲ್ಲ ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡಿತ್ತು. ಇದೀಗ ಮತ್ತೆ 2014ರ ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದು, ರಾಯಲ ಸೀಮೆಯ ಪ್ರಾಂತ್ಯದಲ್ಲಿ ಜಗನ್ ಬಲವನ್ನು ಕಡಿಮೆಗೊಳಿಸಲು ಕಾಂಗ್ರೆಸ್ ಹೊಂಚುಹಾಕಿದೆ. ಇದಕ್ಕಾಗಿಯೇ ನೂತನ ತೆಲಂಗಾಣ ರಾಜ್ಯದ ಜಿಲ್ಲೆಗಳ ಪಟ್ಟಿಗೆ ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳನ್ನು ಸೇರಿಸಲು ಉನ್ನತ ಸಚಿವರ ತಂಡ ಶಿಫಾರಸ್ಸು ಮಾಡಿದೆ.

ಆ ಮೂಲಕ ಆ ಎರಡು ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸವಿರುವ ಅಲ್ಪ ಸಂಖ್ಯಾತ ಮತದಾರರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಹವಣಿಸಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.