ಈಗಿನ ಸುದ್ದಿ

ರಾಯಲ-ತೆಲಂಗಾಣ ಇಂದು ಅಂತಿಮ ನಿರ್ಧಾರ..?

ರಾಯಲ-ತೆಲಂಗಾಣ ಇಂದು ಅಂತಿಮ ನಿರ್ಧಾರ..?
Published On :

ನವದೆಹಲಿ: ನೂತನ ತೆಲಂಗಾಣ ರಾಜ್ಯಕ್ಕೆ ಮತ್ತೆ 2 ಜಿಲ್ಲೆಗಳನ್ನು ಸೇರಿಸುವ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಕೇಂದ್ರದ ಉನ್ನತ ಸಚಿವರ ತಂಡ ಬುಧವಾರ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ನಿನ್ನೆ ನವದೆಹಲಿಯ ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ ನಡೆದಿದ್ದ ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿತ್ತು. ಸ್ವತಃ ನೂತನ ರಾಜ್ಯ ರಚನೆಗಾಗಿ ನೇಮಿಸಲ್ಪಟ್ಟಿರುವ ಉನ್ನತ ಸಚಿವರ ತಂಡದಲ್ಲಿನ ಕೆಲ ಸಚಿವರೇ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಬುಧವಾರ ಮತ್ತೊಂದು ಸಭೆ ನಡೆಸಲು ಮುಂದಾಗಿದ್ದಾರೆ.

ನಿನ್ನೆ ನಡೆದಿದ್ದ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಿಂಧೆ, 'ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತಂತೆ ಕರಡು ಪ್ರತಿ ಅಂತಿಮವಾಗಿದ್ದು, ಕೇಂದ್ರದ ಉನ್ನತ ಸಚಿವರ ತಂಡದೊಂದಿಗೆ ನಾವು ಚರ್ಚೆ ನಡೆಸಿದ್ದೇವೆ. ಆದರೆ ಸಭೆಯಲ್ಲಿ ಒಮ್ಮತದ ನಿರ್ಧಾರ ಮೂಡಿಲ್ಲ. ಹಾಗಾಗಿ ನಾಳೆ 8 ಗಂಟೆಗೆ ಮತ್ತೆ ಸಭೆ ಸೇರಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.

ಆಡಳಿತಾತ್ಮಕ ದೃಷ್ಟಿಯಿಂದ ನೂತನ ತೆಲಂಗಾಣ ರಾಜ್ಯಕ್ಕೆ ಈಗಿರುವ 10 ಜಿಲ್ಲೆಗಳೊಂದಿಗೆ ರಾಯಲ ಸೀಮೆ ಪ್ರಾಂತ್ಯದ ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳನ್ನು ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಕೇಂದ್ರದ ಸಚಿವರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ತೆಲಂಗಾಣ ರಾಜ್ಯಕ್ಕಾಗಿ ಆಗ್ರಹಿಸುತ್ತಿರುವ ತೆಲಂಗಾಣ ಭಾಗದ ಜನಪ್ರತಿನಿಧಿಗಳು ಕೂಡ ಕೇಂದ್ರದ ನೂತನ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನೂತನ ತೆಲಂಗಾಣ ರಾಜ್ಯದ ಅಸ್ತಿತ್ವ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ನೂತನ ಶಿಫಾರಸ್ಸಿನ ಹಿಂದೆ ಸೋನಿಯಾ 'ಕೈ' ವಾಡ
ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮತ್ತೊಂದು ಪ್ರಮುಖ ಅಂಶವೆಂದರೆ ತೆಲಂಗಾಣ ರಾಜ್ಯ ರಚನೆ ಪ್ರಕ್ರಿಯೆಲ್ಲಿನ ನೂತನ ನಿರ್ಧಾರದ ಹಿಂದೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈವಾಡವಿದ್ದು, ರಾಯಲ ಸೀಮೆ ಪ್ರಾಂತ್ಯದ ತಮ್ಮ ಪ್ರಮುಖ ಎದುರಾಳಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಬಲವನ್ನು ಕುಂದಿಸಲು ಸೋನಿಯಾ ಮುಂದಾಗಿದ್ದಾರೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟಾರ್ಗೆಟ್ 'ಜಗನ್‌'
ಪ್ರಸ್ತುತ ರಾಯಲಸೀಮೆಯ ಪ್ರಾಂತ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷವೇ ಪ್ರಮುಖ ಪಕ್ಷವಾಗಿತ್ತು. ಆಗ ರಾಯಲಸೀಮೆಯನ್ನು ಪ್ರತಿನಿಧಿಸುತ್ತಿದ್ದ ವೈಎಸ್ ರಾಜಶೇಖರ ರೆಡ್ಡಿ ಅವರು ತಮ್ಮ ಪ್ರಭಾವಿ ವರ್ಚಸ್ಸಿನಿಂದ ಮುಖ್ಯಮಂತ್ರಿಯಾಗಿದ್ದರು. ಆದರೆ ಅವರ ಮರಣಾನಂತರ ಆಂಧ್ರಪ್ರದೇಶ ರಾಜಕೀಯದಲ್ಲಿ ಉಂಟಾದ ನಾಟಕೀಯ ಬೆಳವಣಿಗೆಗಳಿಂದಾಗಿ ಅವರ ಮಗ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು.

ಅಲ್ಲದೆ ಇತ್ತೀಚೆಗೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲೂ ಕೂಡ ಅವರ ಪಕ್ಷ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿ ರಾಯಲಸೀಮೆಯ ಎಲ್ಲ ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡಿತ್ತು. ಇದೀಗ ಮತ್ತೆ 2014ರ ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದು, ರಾಯಲ ಸೀಮೆಯ ಪ್ರಾಂತ್ಯದಲ್ಲಿ ಜಗನ್ ಬಲವನ್ನು ಕಡಿಮೆಗೊಳಿಸಲು ಕಾಂಗ್ರೆಸ್ ಹೊಂಚುಹಾಕಿದೆ. ಇದಕ್ಕಾಗಿಯೇ ನೂತನ ತೆಲಂಗಾಣ ರಾಜ್ಯದ ಜಿಲ್ಲೆಗಳ ಪಟ್ಟಿಗೆ ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳನ್ನು ಸೇರಿಸಲು ಉನ್ನತ ಸಚಿವರ ತಂಡ ಶಿಫಾರಸ್ಸು ಮಾಡಿದೆ.

ಆ ಮೂಲಕ ಆ ಎರಡು ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸವಿರುವ ಅಲ್ಪ ಸಂಖ್ಯಾತ ಮತದಾರರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಹವಣಿಸಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.