'370'ವಿಧಿ ವಿವಾದ: ಬಹಿರಂಗ ಚರ್ಚೆಗೆ ಸಿದ್ಧ: ಒಮರ್ ಅಬ್ದುಲ್ಲಾ

ಶ್ರೀನಗರ: 370 ವಿಧಿ ಕುರಿತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ವಿಧಿ ವಿವಾದ ಕುರಿತು ಮೋದಿ ಅವರೊಂದಿಗೆ ಬಹಿರಂಗವಾಗಿ ಚರ್ಚೆ ನಡೆಸಲು ಸಿದ್ಧರಿರುವುದಾಗಿ ಹೇಳಿದ್ದಾರೆ.
ಜಮ್ಮುವಿನಲ್ಲಿ ಆಯೋಜಿಸಲಾಗಿದ್ದ ಬಹಿರಂಗ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಒಮರ್ ಅಬ್ದುಲ್ಲಾ ಅವರು, ನರೇಂದ್ರ ಮೋದಿ ಅವರಿಗೆ 370ರ ವಿಧಿಯ ಕುರಿತು ಚರ್ಚೆ ನಡೆಯಬೇಕಿದ್ದರೆ ನಾನು ಬಹಿರಂಗ ಚರ್ಚೆಗೆ ಸಿದ್ಧ. ಸ್ಥಳ ಮತ್ತು ದಿನಾಂಕವನ್ನು ಅವರೇ ನಿಗದಿ ಮಾಡಲಿ ನಾನು ಚರ್ಚೆಗೆ ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
'ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಗ್ಗೆ ಕಿಂಚಿತ್ತೂ ತಿಳಿಯದ ವ್ಯಕ್ತಿಯೊಬ್ಬರು ವಿಶೇಷ ವಿಧಿಯ ಬಗ್ಗೆ ಟೀಕೆ ಮಾಡುತ್ತಿರುವುದನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ. 370ರ ವಿಧಿಯನ್ನು ಸಂಪೂರ್ಣವಾಗಿ ತಿಳಿದಿಲ್ಲದವರು ವಿಧಿಯ ಬಗ್ಗೆ ಮಾತನಾಡುತ್ತಿದ್ದಾರೆ. 370ರ ವಿಧಿ ಆಸ್ತಿ ಕುರಿತಾಗಲಿ ಅಥವಾ ಗೃಹ ಕಾನೂನುಗಳನ್ನು ಪ್ರತಿಪಾದಿಸುವುದಿಲ್ಲ. ಬದಲಾಗಿ ಈ ರಾಜ್ಯವನ್ನು ದೇಶದ ಉಳಿದ ರಾಜ್ಯಗಳೊಂದಿಗೆ ಸಂಪರ್ಕಿಸುವ ವೇದಿಕೆಯಾಗಿದೆ.
'370 ವಿಧಿಯನ್ನು ಯಾರು ಹಾಳುಗೆಡವಿದರು ಎಂಬುದು ನಮಗೆ ತಿಳಿದಿದೆ. ನರೇಂದ್ರ ಮೋದಿ ಅವರಿಗೆ 370ರ ಬಗ್ಗೆ ಇರುವ ಜ್ಞಾನ ಸಾಲದು. ಹೀಗಿದ್ದೂ ಅವರು ಚರ್ಚೆ ನಡೆಸುವುದಾರೆ ನಾನು ಕೂಡ ಬಹಿರಂಗ ಚರ್ಚೆಗೆ ಸಿದ್ಧ. ಅವರು ಗುಜರಾತ್ ರಾಜಧಾನಿ ಅಹಮದಾಬಾದಿನಲ್ಲಿ ಚರ್ಚೆ ನಡೆಸಿದರೂ ನಾನು ಅಲ್ಲಿ ಹೋಗಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಿದ್ಧ' ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಈ ಹಿಂದೆ ಜಮ್ಮುವಿನಲ್ಲಿ ನಡೆದಿದ್ದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ಕಲಂ 370 ವಿಧಿಯ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಕೂಲಂಕುಷ ಚರ್ಚೆಯಾಗಬೇಕಿದ್ದು, ಜಮ್ಮು ಮತ್ತು ಕಾಶ್ಮೀರ ರಾಜ್ಯದ ನಾಗರಿಕರಿಗೆ ದೇಶದಲ್ಲಿ ಎಸ್ಟಿ ಮತ್ತು ಎಸ್ಸಿ ಪಂಗಡಗಳಿಗೆ ನೀಡಲಾಗುತ್ತಿರುವ ಸವಲತ್ತುಗಳಂತೆಯೇ ವಿಶೇಷ ಹಕ್ಕುಗಳನ್ನು ನೀಡಬೇಕು ಎಂದು ಹೇಳಿದ್ದರು.
ಮೋದಿ ಹೇಳಿಕೆಗೆ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


