ಕಾಪ್ಟರ್ ಹಗರಣ: ಮಧ್ಯವರ್ತಿ ವಿಚಾರಣೆಗೆ ಅಧಿಕಾರಿಗಳ ನಕಾರ

ರೋಮ್: ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ನ್ಯಾಯಾಲಯ ಅನುಮತಿ ನೀಡಿದರು ಕೂಡ ಬಂಧಿತ ಮಧ್ಯವರ್ತಿಯನ್ನು ವಿಚಾರಣೆಗೊಳಪಡಿಸಲು ಭಾರತೀಯ ತನಿಖಾಧಿಕಾರಿಗಳು ನಕಾರ ವ್ಯಕ್ತಪಡಿಸಿದ್ದಾರೆ.
ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣ ಸಂಬಂಧ ಇತ್ತೀಚೆಗೆ ಇಟಿಲಿ ತನಿಖಾಧಿಕಾರಿಗಳು ಮಧ್ಯವರ್ತಿ ಗಿಡೋ ಹಶ್ಕೆಯನ್ನು ಬಂಧಿಸಿದ್ದರು. ಇದೇ ಪ್ರಕರಣ ಸಂಬಂಧ ಬಂಧಿತರ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕೇಳಿದ್ದ ಭಾರತೀಯ ಅಧಿಕಾರಿಗಳು, ಅನುಮತಿ ದೊರೆತರೂ ಕೂಡ ವಿಚಾರಣೆ ನಡೆಸಲು ಹಿಂದೇಟು ಹಾಕುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಆದರೆ ಅಧಿಕಾರಿಗಳ ಈ ನಡೆಗೆ ಕಾರಣವೇನು ಎಂದು ಇದುವರೆಗೂ ತಿಳಿದು ಬಂದಿಲ್ಲ.
ಇಟಲಿಯ ಮಿಲಾನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಮಧ್ಯವರ್ತಿ ಗಿಡೋ ಹಶ್ಕೆಯನ್ನು ವಿಚಾರಣೆಗೊಳಪಡಿಸಲಾಯಿತು. ಈ ವೇಳೆ ನ್ಯಾಯಾಲಯದಲ್ಲಿ ಇಟಲಿ ತನಿಖಾಧಿಕಾರಿಗಳೊಂದಿಗೆ ಭಾರತೀಯ ತನಿಖಾಧಿಕಾರಿಗಳು ಕೂಡ ಉಪಸ್ಥಿತರಿದ್ದರು. ಮಿಲಾನ್ ನ್ಯಾಯಾಲಯ ಗಿಡೋ ಹಶ್ಕೆಯನ್ನು ವಿಚಾರಣೆಗೊಳಪಡಿಸಲು ಭಾರತೀಯ ಅಧಿಕಾರಿಗಳಿಗೆ ಅನುಮತಿ ನೀಡಿತ್ತು. ಆದರೆ ಅಧಿಕಾರಿಗಳು ತನಿಖೆಗೆ ನಕಾರ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ನ್ಯಾಯಾಲಯದಲ್ಲಿ ಗಿಡೋ ಹಶ್ಕೆ ತನ್ನ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಕಾಪ್ಟರ್ ಖರೀದಿ ಪ್ರಕ್ರಿಯೆಗಾಗಿ ಭಾರತೀಯ ವಾಯುದಳದ ಅಧಿಕಾರಿಗಳಿಗೆ 6ಮಿಲಿಯನ್ ಯೂರೋ, 8.4 ಮಿಲಿಯನ್ ಯೂರೋ ಹಣವನ್ನು ಸರ್ಕಾರದ ಅಧಿಕಾರಿಗಳಿಗೆ ನೀಡಿರುವುದಾಗಿ ನ್ಯಾಯಾಲಯದಲ್ಲಿ ಹೇಳಿದ್ದಾನೆ. ಅಲ್ಲದೆ ಮತ್ತೊಂದು ಪ್ರಮುಖ ಅಂಶವೆಂದರೆ ಭಾರತದ ಕೆಲ ಪ್ರಮುಖ ರಾಜಕಾರಣಿಗಳೂ ಕೂಡ ಈ ಒಪ್ಪಂದ ಕುದುರಿಸಲು ಹಣ ಪಡೆದಿದ್ದಾರೆ ಎಂದು ಗಿಡೋ ಆರೋಪಿಸಿದ್ದಾನೆ.
ಒಟ್ಟಾರೆ ಬಹುಕೋಟಿ ವಿವಿಐಪಿ ಹಗರಣದ ಆರೋಪಿಗಳ ವಿಚಾರಣೆಗಾಗಿ ಹಪಹಪಿಸುತ್ತಿದ್ದ ಭಾರತೀಯ ತನಿಖಾಧಿಕಾರಿಗಳು, ಈಗ ಅವಕಾಶ ಸಿಕ್ಕರೂ ವಿಚಾರಣೆಗೆ ಮುಂದಾಗದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


