ಸಂಜಯ್ ದತ್ಗೆ ಪೆರೋಲ್: ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ

ಪುಣೆ: ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಶಿಕ್ಷೆಗೊಳಗಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿರುವುದನ್ನು ಖಂಡಿಸಿ, ಕೆಲ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಟ ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ನೀಡಿ ಅವರನ್ನು ಪೆರೋಲ್ ರಜೆಯ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ ಜೈಲು ಅಧಿಕಾರಿಗಳ ಈ ಕಾರ್ಯವನ್ನು ಟೀಕಿಸಿರುವ ಕೆಲ ಸಂಘಟನೆಯ ಕಾರ್ಯಕರ್ತರು ಪುಣೆಯ ಎರವಾಡ ಜೈಲಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಜಯ್ ದತ್ ಅವರನ್ನು ಸಾಮಾನ್ಯ ಖೈದಿಗಳಂತೆಯೇ ಕಾಣಬೇಕು ಎಂದು ಆಗ್ರಹಿಸುತ್ತಿರುವ ಪ್ರತಿಭಟನಾಕಾರರು, ಕೂಡಲೇ ಅವರನ್ನು ಜೈಲಿಗೆ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಸಂಜಯ್ ದತ್ ಅವರ ಪತ್ನಿ ಮಾನ್ಯತಾ ಅವರಿಗೆ ಆರೋಗ್ಯ ಸರಿಯಿಲ್ಲ. ಹೀಗಾಗಿ ತನಗೆ ಪೆರೋಲ್ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ಪುಣೆ ವಿಭಾಗೀಯ ಆಯುಕ್ತರು ಸಂಜಯ್ಗೆ ಪೆರೋಲ್ ನೀಡಿದ್ದರು. ಕಾಲಿಗೆ ಗಾಯವಾದ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅ. 1ರಂದು ಸಂಜಯ್ ಅವರಿಗೆ ಯರವಾಡ ಜೈಲು ಅಧಿಕಾರಿಗಳು 14 ದಿನಗಳ ಪೆರೋಲ್ ನೀಡಿದ್ದರು. ಆದರೆ ಕಾಲಿನ ಗಾಯ ವಾಸಿಯಾಗದ ಹಿನ್ನೆಲೆಯಲ್ಲಿ ಅ. 14ರಂದು ಮತ್ತೆ 14 ದಿನಗಳ ಕಾಲ ಪೆರೋಲ್ ಅವದಿಯನ್ನು ಅಧಿಕಾರಿಗಳು ವಿಸ್ತರಿಸಿದ್ದರು.
ನೂತನ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಕಾಣಿಸಿಕೊಂಡ ಮಾನ್ಯತಾ
ಸಂಜಯ್ ದತ್ ಪೆರೋಲ್ಗೆ ವಿರೋಧಕ್ಕೆ ಕಾರಣ ಅವರ ಪತ್ನಿ ಮಾನ್ಯತಾ ದತ್ ಎಂದು ತಿಳಿದುಬಂದಿದೆ. ಸದ್ಯ ತಮ್ಮ ಪತ್ನಿ ಮಾನ್ಯತಾಗೆ ಆರೋಗ್ಯ ಸರಿಯಿಲ್ಲ ಎಂದು ಕಾರಣವೊಡ್ಡಿ ಸಂಜಯ್ ದತ್ ಪೆರೋಲ್ ಪಡೆದಿದ್ದಾರೆ.
ಆದರೆ ಅವರ ಪತ್ನಿ ಆರೋಗ್ಯವಾಗಿಯೇ ಇದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ ಶಾಹಿದ್ ಕಪೂರ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ಆರ್....ರಾಜ್ ಕುಮಾರ್ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದರು. ಈ ಕುರಿತ ಚಿತ್ರಗಳು ಮಾಧ್ಯಮಗಳಲ್ಲಿಯೂ ಕೂಡ ಪ್ರಸಾರವಾಗಿತ್ತು. ಇದೀಗ ಇದೇ ಚಿತ್ರ ಪ್ರತಿಭಟನೆಗೆ ಕಾರಣವಾಗಿದೆ.
ಭಾರತೀಯ ದಂಡ ಸಂಹಿತೆ ಅನ್ವಯ ಪ್ರತಿಯೊಬ್ಬ ಕೈದಿಗೂ ವರ್ಷದಲ್ಲಿ ಇಂತಿಷ್ಟು ದಿನ ಪೆರೋಲ್ ಮೂಲಕ ರಜೆ ನೀಡಲಾಗುತ್ತದೆ. ಕೆಲವೊಂದು ವಿಶೇಷ ಕಾರಣಗಳಿಂದಾಗಿ ಅಥವಾ ಸಂದರ್ಭಕ್ಕನುಗುಣವಾಗಿ ಪೆರೋಲ್ ನೀಡುವ ಪದ್ದತಿಯಿದೆ.
1993ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟದ ವೇಳೆ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಅಪರಾಧಕ್ಕಾಗಿ ಮಾರ್ಚ್ನಲ್ಲಿ ಸಂಜಯ್ ದತ್ಗೆ ಟಾಡಾ ಕೋರ್ಟ್ ಐದು ವರ್ಷಗಳ ಶಿಕ್ಷೆ ವಿಧಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


