'ಆಮ್ ಆದ್ಮಿ'ಗೆ ಐತಿಹಾಸಿಕ ದಿನ: ಕೇಜ್ರೀವಾಲ್

ನವದೆಹಲಿ: ಇಂದು ಆಮ್ ಆದ್ಮಿ ಪಕ್ಷಕ್ಕೆ ಹಲವು ಕಾರಣಗಳಿಂದ ಐತಿಹಾಸಿಕ ದಿನವಾಗಿದೆ ಎಂದು ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರೀವಾಲ್ ಅವರು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರೀವಾಲ್ ಅವರು, ಈ ಗೆಲುವು ನಮಗೆ ಹಲವು ಕಾರಣಗಳಿಂದ ಐತಿಹಾಸಿಕ ದಿನವಾಗಿದೆ. ಭ್ರಷ್ಟಾಚಾರ, ಹಣ ಬಲ ಮತ್ತು ತೋಳ್ಬಲದ ಹೊರತಾಗಿಯೂ ಜನತೆ ನಮ್ಮ ಪ್ರಾಮಾಣಿಕತೆಯನ್ನು ಗುರುತಿಸಿ ನಮಗೆ ಮತನೀಡಿದ್ದಾರೆ. ಈ ಗೆಲುವು ನನ್ನ ಗೆಲುವಲ್ಲ, ದೇಶದ ಜನತೆಯ ಗೆಲುವಾಗಿದೆ.
ಚುನಾವಣಾ ಪೂರ್ವದಲ್ಲಿ ನನ್ನನ್ನು ಚುನಾವಣೆಯಿಂದ ದೂರವಿಡಲು ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ನಾನು ಕೂಡ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೆ. ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೂ ನನಗೂ ಯಾವುದೇ ವೈಯುಕ್ತಿಕ ದ್ವೇಷಗಳಿಲ್ಲ. ನನ್ನ ಪಕ್ಷದ ಚುನಾವಣಾ ಖರ್ಚಿನ ಕುರಿತಾಗಿ ಪ್ರತಿಯೊಂದು ಪೈಸೆಗೂ ನಾನು ಆಯೋಗಕ್ಕೆ ಲೆಕ್ಕ ಕೊಟ್ಟಿದ್ದೇನೆ.
ಪ್ರಮಾಣಿಕ ರಾಜಕೀಯಕ್ಕೆ ಜನತೆ ಮನ್ನಣೆ ನೀಡಿದ್ದು, ಅವರಿಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪಕ್ಷಕ್ಕೆ ಯಾವುದೇ ನಿರ್ದಿಷ್ಟ ಕಾರ್ಯಕರ್ತರಿಲ್ಲ. ದೇಶದ ಜನರೇ ನಮ್ಮ ಕಾರ್ಯಕರ್ತರು. ತಮ್ಮ ಕೆಲಸಗಳಿಗೆ ರಜೆ ಹಾಕಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು ಅಂತಹ ಜನರಿಗೆ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ.
ಪ್ರಾಮಾಣಿಕತೆಯಿಂದ ರಾಜಕೀಯ ಸಾಧ್ಯವೆಂಬುದನ್ನು ಜನತೆ ತೋರಿಸಿಕೊಟ್ಟಿದ್ದಾರೆ. ಶಿಸ್ತಿನ ರಾಜಕಾರಣಕ್ಕೆ ಜನ ಮನ್ನಣೆ ನೀಡಿ ಮತಹಾಕಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದ ಹಾಗೆ ನಾನು ಮತ್ತು ನನ್ನ ಪಕ್ಷ ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ ಎಂದು ಕೇಜ್ರೀವಾಲ್ ಹೇಳಿದರು.
ಅಂತೆಯೇ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದೇ ಇರುವುದರಿಂದ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಜ್ರೀವಾಲ್ ಅವರು, ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಅಗತ್ಯ ಬಿದ್ದರೆ ವಿಪಕ್ಷವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


