ಸಿಂಗಾಪುರದಲ್ಲಿ ಕೋಮು ಗಲಭೆಗೆ ಕಾರಣವಾದ ಭಾರತೀಯನ ಸಾವು

ಸಿಂಗಾಪುರ: ನೆರೆಯ ಸಿಂಗಾಪುರದಲ್ಲಿ ಭಾರತೀಯನ ಸಾವು ಕೋಮು ಗಲಭೆಗೆ ಪ್ರಚೋದನೆ ನೀಡಿದ್ದು, 27ಕ್ಕೂ ಅಧಿಕ ಭಾರತ ಮೂಲದ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ನಡೆದ ರಸ್ತೆ ಅಫಘಾತದಲ್ಲಿ ಭಾರತೀಯನೋರ್ವ ಸಾವನ್ನಪ್ಪಿದ್ದು, ಅಫಘಾತವನ್ನು ಖಂಡಿಸಿ ಅಲ್ಲಿನ ಭಾರತ ಮೂಲದ ನಿವಾಸಿಗಳು ನಡೆಸಿದ ಪ್ರತಿಭಟನೆ ಕೋಮು ಹಿಂಸಾಚಾರಕ್ಕೆ ತಿರುಗಿದೆ. ಘಟನೆಯಿಂದಾಗಿ ಸಿಂಗಾಪುರದಲ್ಲಿನ 'ಮಿನಿ ಭಾರತ' ಜಿಲ್ಲೆಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ಅಲ್ಲಿನ ಸರ್ಕಾರಿ ಬಸ್, ಟ್ಯಾಕ್ಸಿಗಳು ಸೇರಿದಂತೆ ಮೂರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ಅಲ್ಲಿನ ಪೊಲೀಸರು ಸುಮಾರು 400 ದಕ್ಷಿಣ ಏಷ್ಯಾ ಮತ್ತು ಭಾರತ ಮೂಲದ ನಿವಾಸಿಗಳನ್ನು ಶಂಕಿಸಿದ್ದು, ಈಗಾಗಲೇ 27ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಧಿತರ ಮೇಲೆ ಕೋಮು ಹಿಂಸಾಚಾರದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಅಂತೆಯೇ ಹಿಂಸಾಚಾರ ಪೀಡಿತ ಮಿನಿ ಭಾರತ ನಗರದಲ್ಲಿ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ತಕ್ಕಮಟ್ಟಿಗೆ ಶಾಂತಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಯೋಧರು ಗಸ್ತು ತಿರುಗುತ್ತಿದ್ದು, ಶಂಕೆ ಬಂದ ವ್ಯಕ್ತಿಗಳನ್ನು ಯಾವುದೇ ಮುಲಾಜಿಲ್ಲದೆ ವಿಚಾರಣೆಗೊಳಪಡಿಸುತ್ತಿದ್ದಾರೆ.
ಘಟನೆಯನ್ನು ಖಂಡಿಸಿರುವ ಸಿಂಗಾಪುರ ಪ್ರಧಾನಿ ಲೀ ಶಿಯಾನ್ ಲಾಂಗ್ ಅವರು, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದೊಂದು ಹೀನ ಕೃತ್ಯವಾಗಿದ್ದು, ಇಂತಹ ವಿನಾಶಕಾರಿ ಮತ್ತು ಅಪರಾಧ ವರ್ತನೆಯನ್ನು ಸರ್ಕಾರ ಎಂದಿಗೂ ಕ್ಷಮಿಸುವುದಿಲ್ಲ. ತಪ್ಪಿತಸ್ಥರನ್ನು ಕಾನೂನಿನ ಅನ್ವಯ ಕಠಿಣ ಶಿಕ್ಷೆಗೊಳಪಡಿಸಲಾಗುತ್ತದೆ ಎಂದು ಹೇಳಿದರು.
ಭಾನುವಾರ ನಡೆದಿದ್ದ ರಸ್ತೆ ಅಫಘಾತವೊಂದರಲ್ಲಿ ಭಾರತೀಯ ಮೂಲದ ವ್ಯಕ್ತಿ ಮೇಲೆ ಸಿಂಗಾಪುರ ಸರ್ಕಾರಿ ಬಸ್ ಒಂದು ಹರಿದು ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಇದನ್ನು ಖಂಡಿಸಿ ಆತನ ಸಂಬಂಧಿಕರು ಮತ್ತು ಸ್ನೇಹಿತರು ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಸಂಭವಿಸಿದ ಹಿಂಸಾಚಾರ ಕೋಮು ಹಿಂಸಾಚಾರವಾಗಿ ಮಾರ್ಪಟ್ಟಿದೆ. ಘಟನೆಯಿಂದ ಭಾರತೀಯರೇ ಹೆಚ್ಚಾಗಿ ನೆಲೆಸಿರುವ 'ಮಿನಿ ಭಾರತ' ನಗರದಲ್ಲಿ ಕೋಮು ಗಲಭೆ ಭುಗಿಲೆದ್ದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


