ದೆಹಲಿ ಸರ್ಕಾರ ರಚನೆಯಲ್ಲಿ ಕೇಂದ್ರದ ಪಾತ್ರವಿಲ್ಲ: ಶಿಂಧೆ

ನವದೆಹಲಿ: ದೆಹಲಿ ರಾಜ್ಯ ಸರ್ಕಾರ ರಚನಾ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ವಹಿಸಬೇಕಾದ ಪಾತ್ರವೇನೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸುಶೀಲ್ ಕುಮಾರ್ ಶಿಂಧೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ನಡೆದ ಸಭೆಯಲ್ಲಿ ದೆಹಲಿ ವಿಧಾನಸಭೆ ಚುನಾವಣೆಯ ಸೋಲಿನ ಕುರಿತು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಅಂತೆಯೇ ಅತಂತ್ರ ಸ್ಥಿತಿಯಲ್ಲಿರುವ ದೆಹಲಿ ವಿಧಾನಸಭೆಗೆ ನೂತನ ಸರ್ಕಾರ ರಚಿಸುವ ಜವಾಬ್ದಾರಿಯನ್ನು ಉಪರಾಜ್ಯಪಾಲರಿಗೆ ವಹಿಸುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ದೆಹಲಿ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ರಚಿಸುವ ಕುರಿತು ಸಧ್ಯಕ್ಕೆ ಕೇಂದ್ರ ಸರ್ಕಾರ ವಹಿಸಬೇಕಾದ ಪಾತ್ರವೇನೂ ಇಲ್ಲ. ಸರ್ಕಾರ ರಚನಾ ಪ್ರಕ್ರಿಯೆಯ ಕುರಿತು ಉಪ ರಾಜ್ಯಪಾಲರು ಸೂಕ್ತ ನಿರ್ಧಾರ ಕೈಗೊಳ್ಳಲ್ಲಿದ್ದಾರೆ ಎಂದು ಹೇಳಿದರು.
ಒಟ್ಟಾರೆ ಪ್ರಸಕ್ತ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೊಳೆದು ಹೋಗಿದ್ದು, ಪ್ರತಿಷ್ಟೆಯ ಕಣವೆಂದೇ ಭಾವಿಸಲಾಗಿದ್ದ ದೆಹಲಿ ಚುನಾವಣೆಯಲ್ಲಿಯೂ ಕೂಡ ಕಾಂಗ್ರೆಸ್ ಧೂಳಿಪಟವಾಗಿದೆ. ಆದರೆ ಈ ಭಾರಿ ಕಾಂಗ್ರೆಸ್ ಪಾಲಿಗೆ ಕಹಿಯಾದರೂ, ಬಿಜೆಪಿ ಪಕ್ಷಕ್ಕೆ ಸಿಹಿಯಾಗಿಲ್ಲ ಎನ್ನವುದು ಮತ್ತೊಂದು ಪ್ರಮುಖ ಅಂಶವಾಗಿದೆ. ಏಕೆಂದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೂಡ ಅದಕ್ಕೆ ಸ್ಪಷ್ಟಬಹುಮತ ಪಡೆದಿಲ್ಲ.
ದೆಹಲಿ ವಿಧಾನಸಭೆಯಲ್ಲಿ ಒಟ್ಟು 70 ಸ್ಥಾನಗಳಿದ್ದು, ಅಧಿಕಾರ ರಚಿಸಲು 36 ಸ್ಥಾನಗಳ ಅವಶ್ಯಕತೆ ಇದೆ. ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ 31 ಸ್ಥಾನಗಳನ್ನು ಹೊಂದಿದ್ದು, ಆಮ್ ಆದ್ಮಿ ಪಕ್ಷ 28 ಸ್ಥಾನಗಳನ್ನು ಪಡೆದುಕೊಂಡಿದೆ. ಹೀಗಾಗಿ ಯಾವುದೇ ಪಕ್ಷವೂ ಕೂಡ ಸ್ಪಷ್ಟ ಬಹುಮತ ಪಡೆಯದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.
ಇದೀಗ ಚೆಂಡು ದೆಹಲಿ ಉಪರಾಜ್ಯಪಾಲರ ಅಂಗಳದಲ್ಲಿದ್ದು, ಅವರು ಕೈಗೊಳ್ಳುವ ನಿರ್ಧಾರದ ಮೇಲೆಯೇ ದೆಹಲಿ ಸರ್ಕಾರದ ಭವಿಷ್ಯ ನಿಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


