ಎಕೆ 47 ಸೃಷ್ಟಿಕರ್ತ ಕಲಾಶ್ನಿಕೋವ್ ನಿಧನ

ನವದೆಹಲಿ: ವಿಧ್ವಂಸಕಾರಿ ಬಂದೂಕು ಎಕೆ 47 ಸೃಷ್ಟಿಕರ್ತ ರಷ್ಯಾ ಮೂಲದ ಮಿಖಾಯಿಲ್ ಕಲಾಶ್ನಿಕೋವ್ ನಿಧನರಾಗಿದ್ದು, ಅವರಿಗೆ 94 ವರ್ಷ ವಯಸ್ಸಾಗಿತ್ತು.
ಆಧುನಿಕ ಯುದ್ಧದ ಸೈನಿಕರ ಪ್ರಬಲ ಅಸ್ತ್ರವೆಂದೇ ಪರಿಗಣಿತವಾಗಿರುವ ಎಕೆ 47ನ ಸೃಷ್ಟಿಕರ್ತ ಮಿಖಾಯಿಲ್ ಕಲಾಶ್ನಿಕೋವ್ ಅವರು ರಷ್ಯಾದ ಇಝಿಸ್ಕಾ ನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಕಲಾಶ್ನಿಕೋವ್ ಅವರು ಕಳೆದ ಹಲವು ವರ್ಷಗಳಿಂದ ಮೂತ್ರಕೋಶ ಸೋಂಕಿನಿಂದ ಬಳಲುತ್ತಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಗುತ್ತಿತ್ತು.
ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಿಖಾಯಿಲ್ ಕಲಾಶ್ನಿಕೋವ್ ಅವರು ಸಿದ್ಧಪಡಿಸಿರುವ ಎಕೆ 47 ಬಂದೂಕು ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆಯಾಗುತ್ತಿರುವ ಅಸ್ತ್ರವೆಂಬ ಖ್ಯಾತಿ ಗಳಿಸಿಕೊಂಡಿದೆ. ವಿಶ್ವಾದ್ಯಂತ ಸುಮಾರು 100ಕ್ಕೂ ಅಧಿಕ ದೇಶಗಳ ಸೈನಿಕರು ಹೆಚ್ಚಾಗಿ ಎಕೆ 47 ಬಂದೂಕುಗಳನ್ನೇ ಬಳಸುತ್ತಿದ್ದಾರೆ.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿ ದೇಶ ಅಸಾಲ್ಟ್ ಬಂದೂಕುಗಳನ್ನು ಬಳಕೆಗೆ ತಂದಿತ್ತು. ಇದಕ್ಕೂ ಮೊದಲು ಬಳಕೆಯಲ್ಲಿದ್ದ, ಬಂದೂಕುಗಳು 100 ಮೀಟರ್ ದೂರದವರೆಗೆ ಮಾತ್ರ ತಲುಪಲು ಶಕ್ತವಾಗಿದ್ದವು. ಹೀಗಾಗಿ ಜರ್ಮನಿ ತನ್ನ ಬಂದೂಕುಗಳನ್ನು ಮತ್ತಷ್ಟು ಸುಧಾರಿಸುವ ಕಾರ್ಯಕ್ಕೆ ಮುಂದಾಯಿತು. ಅದಾಗಲೇ ಬಂದೂಕು ತಯಾರಿಕೆಯಲ್ಲಿ ಸಂಶೋಧನೆ ನಡೆಸುತ್ತಿದ್ದ ಕಲಾಶ್ನಿಕೋವ್ ಅವರು ಎಕೆ 47 ಬಂದೂಕು ಮಾದರಿಯನ್ನು ಸಿದ್ದಪಡಿಸಿದ್ದರು.
ಕಲಾಶ್ನಿಕೋವ್ ಸಿದ್ಧಪಡಿಸಿದ ಬಂದೂಕು ಮಾದರಿ ಎಲ್ಲರಿಗೂ ಒಪ್ಪಿಗೆಯಾಗಿ, 1947ರಲ್ಲಿ ಇದು ಮೊದಲ ಬಾರಿಗೆ ಬಳಕೆಯಾಯಿತು. ಆಗಿನಿಂದಲೂ ಈ ಬಂದೂಕನ್ನು ಎಕೆ 47 ಎಂದು ಕರೆಯಲಾಗುತ್ತಿದೆ. ಎಕೆ 47 ಎಂದರೆ ಆಬ್ಟೋಮಾಟ್ ಕಲಾಶ್ನಿಕೋವ್ 47 ಎಂದು. ಕಲಾಶ್ನಿಕೋವ್ ಸಿದ್ಧಪಡಿಸಿದ ಈ ಬಂದೂಕು ಸುಮಾರು 300 ಮೀಟರ್ ದೂರದವೆರೆಗಿನ ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯ ಹೊಂದಿತ್ತು. ನಂತರ ಇದೇ ಸರಣಿಯಲ್ಲಿ ಎಕೆ 74, 101, 102, 103, 107 ಮತ್ತು 108ರ ಸುಧಾರಿತ ಬಂದೂಕುಗಳು ಬಳಕೆಗೆ ಬಂದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


