ಈಗಿನ ಸುದ್ದಿ

ಗಂಗೂಲಿ ಹೇಳಿಕೆಯನ್ನು ತಳ್ಳಿಹಾಕಿದ ಯುವತಿ

ಗಂಗೂಲಿ ಹೇಳಿಕೆಯನ್ನು ತಳ್ಳಿಹಾಕಿದ ಯುವತಿ
Published On :

ನವದೆಹಲಿ: ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ನಿವೃತ್ತ ನ್ಯಾಯಮೂರ್ತಿ ಎ.ಕೆ.ಗಂಗೂಲಿ ಅವರ ಹೇಳಿಕೆಯನ್ನು ಕಿರುಕುಳಕ್ಕೊಳಗಾದ ಯುವತಿ ತಳ್ಳಿಹಾಕಿದ್ದಾಳೆ. ಅಲ್ಲದೆ ಗಂಗೂಲಿ ಅವರು ಪ್ರಕರಣದ ತನಿಖಾ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ನೀಡಿರುವ ಹೇಳಿಕೆ ಇದೀಗ ಮಾಧ್ಯಮಗಳಲ್ಲಿ ಬಹಿರಂಗಗೊಂಡಿದ್ದು, ಗಂಗೂಲಿ ಅವರು ಪ್ರಕರಣದಿಂದ ಬಚಾವ್ ಆಗಲು ತಾವು ಅಮಾಯಕರೆಂದು ಹೇಳುಕೊಳ್ಳುತ್ತಿದ್ದಾರೆ. ಅಲ್ಲದೆ ತಾವು ಈ ಹಿಂದೆ ನೀಡಿದ್ದ ತೀರ್ಪುಗಳಿಂದಾಗಿಯೇ ತಮ್ಮ ಮೇಲೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಪ್ರಕರಣದ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿದ್ದಾಳೆ.

ತರಬೇತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಗಂಗೂಲಿ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ.ಸದಾಶಿವಂ ಅವರಿಗೆ ನಿನ್ನೆ ಪತ್ರವೊಂದನ್ನು ಬರೆದಿದ್ದರು. ತಮ್ಮ ಪತ್ರದಲ್ಲಿ ಪ್ರಕರಣದಲ್ಲಿ ತಮ್ಮ ಪಾತ್ರವೇನು ಇಲ್ಲ ಎಂದು ಹೇಳಿಕೊಂಡಿರುವ ಗಂಗೂಲಿ ಅವರು, ನಾನು ಈ ಹಿಂದೆ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ನೀಡಿದ್ದ ತೀರ್ಪುಗೆ ಪ್ರತಿಯಾಗಿ ನನ್ನ ಮೇಲೆ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದರು.

"ನಾನು ಯುವ ವಕೀಲೆಗೆ ಲೈಂಗಿಕ ಕಿರುಕುಳ ನೀಡಿಲ್ಲ ಹಾಗೂ ತಪ್ಪಾಗಿ ನಡೆದುಕೊಂಡಿಲ್ಲ. ನಾನು ಈ ಹಿಂದೆ ಪ್ರಭಾವಿಗಳ ವಿರುದ್ಧ ತೀರ್ಪು ನೀಡಿದ್ದಕ್ಕೆ ಪ್ರತಿಯಾಗಿ ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ. ಆದರೆ, ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ನನ್ನನ್ನು ಸರಿಯಾಗಿ ವಿಚಾರಿಸಿಲ್ಲ. ನನ್ನ ಮಾತನ್ನು ಕೇಳುವಷ್ಟು ವ್ಯವಧಾನವನ್ನೂ ತೋರಿಸಿಲ್ಲ ಎಂದೂ ಅವರು ತಮ್ಮ 8 ಪುಟಗಳ ಪತ್ರದಲ್ಲಿ ಆರೋಪಿಸಿದ್ದರು.

ಅಫಿಡವಿಟ್ ಬಹಿರಂಗಕ್ಕೆ ಆಕ್ರೋಶ:  ಯುವತಿ ಸಲ್ಲಿಸಿದ ಅಫಿಡವಿಟ್‌ನ ಅಂಶಗಳು ಹೇಗೆ ಬಹಿರಂಗವಾದವು ಎಂದೂ ಗಂಗೂಲಿ ಅವರು ಪ್ರಶ್ನಿಸಿದ್ದರು. ಯುವತಿಯ ಹೇಳಿಕೆಗಳಿರುವ ಅಫಿಡವಿಟ್‌ನ ಒಂದು ಪ್ರತಿಯನ್ನು ನನಗೆ ನೀಡುವಂತೆ ಸಮಿತಿ ಸದಸ್ಯರಲ್ಲಿ ಕೇಳಿಕೊಂಡೆ. ಆದರೆ ಅದು ರಹಸ್ಯವಾಗಿರಬೇಕು ಎಂಬ ನೆಪ ಹೇಳಿ ಅದನ್ನು ನೀಡಲು ಅವರು ನಿರಾಕರಿಸಿದರು. ನಂತರ ಅದನ್ನು ಸೋರಿಕೆ ಮಾಡಲಾಯಿತು ಎಂದೂ ಗಂಗೂಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಮತಿ ಸದಸ್ಯರಾದ ಇಂದಿರಾ ಜೈಸಿಂಗ್, ಯುವತಿಯ ಒಪ್ಪಿಗೆಯ ಮೇರೆಗೆ ಅಫಿಡವಿಟ್‌ನ ಅಂಶಗಳನ್ನು ಬಹಿರಂಗಪಡಿಸಿದೆವು ಎಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.