ಏನು ಮಾಡುತ್ತೇವೆ ಎಂದು ಜನರೇ ನೋಡಲಿ: ಕೇಜ್ರಿವಾಲ್

ನವದೆಹಲಿ: ಭ್ರಷ್ಟಾಚಾರ ನಿವಾರಣೆಯೇ ಆಮ್ ಆದ್ಮಿ ಪಕ್ಷದ ಪ್ರಮುಖ ವಿಚಾರವಾಗಿದ್ದು, ಅಧಿಕಾರ ಸ್ವೀಕಾರದ ನಂತರ ನಾವು ಏನು ಮಾಡುತ್ತೇವೆ ಎಂದು ಜನರೇ ನೋಡಲಿ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಏನು ಮಾಡಲಿದೆ ಎಂಬುದನ್ನು ಜನರೇ ನೋಡಲಿದ್ದಾರೆ. ಭ್ರಷ್ಟಾಚಾರ ನಿವಾರಣೆಯೇ ನಮ್ಮ ಅತ್ಯಂತ ಪ್ರಮುಖ ವಿಚಾರವಾಗಿದ್ದು, ಇದಕ್ಕಾಗಿ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುತ್ತೇವೆ. ಅದು ಕೂಡ ಅಧಿಕಾರ ಸ್ವೀಕರಿಸಿದ 15 ದಿನಗಳಲ್ಲಿ ನಾವು ಮಸೂದೆಯನ್ನು ಜಾರಿಗೊಳಿಸುತ್ತೇವೆ. ಇದಕ್ಕಾಗಿ ಇರುವ ಎಲ್ಲ ರೀತಿಯ ಕಾನೂನು ತೊಡಕುಗಳನ್ನು ನಿವಾರಿಸುತ್ತೇವೆ ಎಂದು ಹೇಳಿದರು.
'ಆಮ್ ಆದ್ಮಿ ಪಕ್ಷ 'ಆಮ್ ಆದ್ಮಿ'(ಸಾಮಾನ್ಯ)ಯಾಗಿಯೇ ಜನರೊಂದಿಗೆ ಕೆಲಸ ನಿರ್ವಹಿಸಲಿದೆ. ಭ್ರಷ್ಟಾಚಾರ ನಿವಾರಣೆಯೇ ನಮ್ಮ ಪ್ರಮುಖ ಗುರಿ. 15 ದಿನಗಳಲ್ಲಿ ನಾವು ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುತ್ತೇವೆ. ಆದರೆ ಲೋಕಪಾಲ್ ಮಸೂದೆ ಜಾರಿಗೆ ಸಾಕಷ್ಟು ಕಾನೂನು ತೊಡಕುಗಳಿದ್ದು, ಅದನ್ನು ನಾವು ನಿವಾರಿಸುತ್ತೇವೆ'
ಲೋಕಪಾಲ್ ಜಾರಿ ಬಗ್ಗೆ ವಿಪಕ್ಷಗಳು ಅಪಸ್ವರ ಎತ್ತಿವೆ. ಏಕೆಂದರೆ ಸಂವಿಧಾನದ ಪ್ರಕಾರ, ದೆಹಲಿಯಲ್ಲಿ ಸರ್ಕಾರ ಯಾವುದೇ ಕಾನೂನುಗಳನ್ನು ರಚಿಸಬೇಕಾದರೂ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ. ಆದರೆ ಇದು ಸರಿಯಲ್ಲ. ಇದು ಒಂದು ರೀತಿಯಲ್ಲಿ ಬ್ರಿಟೀಷ್ ಆಡಳಿತವಾದಂತಾಗುತ್ತದೆ. ಭಾರತದಲ್ಲಿ ಆಂಗ್ಲ ಆಡಳಿತವಿದ್ದಾಗ ಇಲ್ಲಿ ಯಾವುದೇ ನಿರ್ಣಯಗಳನ್ನು ಕೈಗೊಳ್ಳಬೇಕಾದರೂ ಇಂಗ್ಲೆಂಡ್ ಸರ್ಕಾರದ ಅನುಮತಿ ಪಡೆಯಬೇಕಿತ್ತು.
ಈಗಲೂ ಕೂಡ ಅಂತೆಯೇ ಇದೆ. ಈಗ ನಾವು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಿದೆ ಅಷ್ಟೆ. ನಾವು ಸ್ವತಂತ್ರ್ಯ ಭಾರತದಲ್ಲಿದ್ದೇವೆ. ಸರ್ಕಾರವನ್ನು ಜನರೇ ಆರಿಸುತ್ತಾರೆ ಎಂದು ಕೇಜ್ರಿವಾಲ್ ಹೇಳಿದರು
ಎಎಪಿ ಸ್ವರಾಜ್ಯ ಜಾರಿ ಕಷ್ಟ: ಬಿಜೆಪಿ
ಈ ನಡುವೆ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ ಪಕ್ಷ, ಎಎಪಿ ಜಾರಿಗೊಳಿಸಬೇಕೆಂದಿರುವ 'ಸ್ವರಾಜ್ಯ' ಜಾರಿ ಕಷ್ಟ ಎಂದು ಹೇಳಿದೆ. ದೆಹಲಿಯಲ್ಲಿ ಮಾತನಾಡಿದೆ ಬಿಜೆಪಿ ಮುಖಂಡ ಬಲ್ಬೀರ್ ಪಂಜ್ ಅವರು, 15 ದಿನದಲ್ಲಿ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿರುವ ಎಎಪಿ ಪಕ್ಷ ಮಸೂದೆಯನ್ನು ಜಾರಿಗೊಳಿಸಲು ಸಾಕಷ್ಟು ಅಡ್ಡಿಗಳಿವೆ. ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೆ ದೆಹಲಿಯಲ್ಲಿ ಲೋಕಪಾಲ ಮಸೂದೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಲೋಕಪಾಲ್ ಜಾರಿಗೆ ಸಾಕಷ್ಟು ಕಾನೂನು ತೊಡಕುಗಳಿವೆ ಎಂದು ಹೇಳಿದ್ದಾರೆ.
ಒಟ್ಟಾರೆ ರಾಷ್ಟ್ರ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸಲು ನಾಂದಿ ಹಾಡಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಇದೇ ಡಿಸೆಂಬರ್ 28ರಂದು ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆ ಮೂಲಕ ಇಡೀ ದೇಶದ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


