ಯುವತಿ ಹಿಂದೆ ಗೂಢಚಾರಿಕೆ: ತನಿಖಾ ಆಯೋಗ ರಚನೆಗೆ 'ಕೇಂದ್ರ'ದ ಸಮ್ಮತಿ

ನವದೆಹಲಿ: ನರೇಂದ್ರ ಮೋದಿ ಅವರ ನೇತೃತ್ವದ ಗುಜರಾತ್ ಸರ್ಕಾರದ ವಿರುದ್ಧ ಕೇಳಿಬಂದಿರುವ 'ಗೂಢಚಾರಿಕೆ' ಆರೋಪದ ಕುರಿತು ತನಿಖೆ ನಡೆಸಲು ಆಯೋಗ ರಚಿಸಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರ ತನಿಖಾ ಆಯೋಗವನ್ನು ರಚಿಸಲು ಮುಂದಾಗಿದ್ದು, ಆಯೋಗದ ಅಧೀನದಲ್ಲಿ ಗುಜರಾತ್ ಸರ್ಕಾರದ ಗೂಢಚಾರಿಕಾ ಪ್ರಕರಣದ ತನಿಖೆ ನಡೆಯಲಿದೆ. ಅಲ್ಲದೆ ಈ ವರೆಗೂ ತನಿಖೆಗೆ ನಡೆಸಿದ ತನಿಖಾ ತಂಡದ ಕಾರ್ಯಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ಸೂಚಿಸಿದೆ. ಆ ಮೂಲಕ ಬಿಜೆಪಿಗೆ ಪರೋಕ್ಷ ತಿರುಗೇಟು ನೀಡಿದೆ.
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮೆಚ್ಚುಗೆ ಸೂಚಿಸಿದ್ದು, ಸರ್ಕಾರ ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಇಡೀ ಪ್ರಕರಣವನ್ನು ಗಮನಿಸಿದರೆ ಇದು ಸಂಪೂರ್ಣವಾಗಿ ವ್ಯಕ್ತಿಯ ಗೌಪ್ಯತೆಯ ಹಕ್ಕು ಮತ್ತು ದೂರವಾಣಿ ಕಾಯ್ದೆಯನ್ನು ಉಲ್ಲಂಘಿಸಿರುವುದು ಕಂಡುಬರುತ್ತದೆ ಎಂದು ಹೇಳಿದರು.
ಆದರೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪ್ರಕರಣವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಮೂಲಕ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಅವರು, ಪ್ರಕರಣವು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು, ಆದರೂ ಕೇಂದ್ರ ಸರ್ಕಾರ ಪ್ರಕರಣದಲ್ಲಿ ಅನವಶ್ಯಕವಾಗಿ ಮೂಗು ತೂರಿಸುತ್ತಿದೆ. ಆ ಮೂಲಕ ತನ್ನ ಎಂದಿನ ಕೆಳಮಟ್ಟದ ರಾಜಕಾರಣವನ್ನು ಮುಂದುವರೆಸಿದೆ ಎಂದು ಹೇಳಿದರು.
ಮತ್ತೊಬ್ಬ ಬಿಜೆಪಿ ಮುಖಂಡ ಮತ್ತು ರಾಜ್ಯಸಭೆಯ ಪ್ರತಿಪಕ್ಷ ನಾಯಕ ರವಿಶಂಕರ್ ಪ್ರಸಾದ್ ಅವರು, ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸಿಬಿಐ ಸಂಸ್ಥೆಯನ್ನು ಕೂಡ ಅದು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ತನ್ನ ತಪ್ಪುಗಳನ್ನು ಎಂದಿಗೂ ತಿದ್ದುಕೊಳ್ಳುವುದಿಲ್ಲ. ಜನರೇ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಈಗಾಗಲೇ ಪ್ರಕರಣ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದು, ಅಂತರ್ಜಾಲ ಸುದ್ದಿ ಸಂಸ್ಥೆಗಳಾದ ಕೋಬ್ರಾಪೋಸ್ಟ್ ಮತ್ತು ಗುಲೈಲ್ ಎಂಬ ವೆಬ್‌ಸೈಟ್‌ಗಳು ಪ್ರಕರಣ ಸಂಬಂಧ ರಹಸ್ಯ ಕಾರ್ಯಾಚರಣೆ ನಡೆಸಿದ್ದವು. ಬೆಂಗಳೂರಿನಲ್ಲಿದ್ದ ಗುಜರಾತ್ ಮೂಲದ ಯುವತಿಯೊಬ್ಬಳನ್ನು ಹಿಂಬಾಲಿಸಲು ಗುಜರಾತ್ ಸರ್ಕಾರದ ಅಂದಿನ ಸಚಿವರಾಗಿದ್ದ ಅಮಿತ್ ಶಾ ಅವರು ಗುಜರಾತ್ ಪೊಲೀಸರನ್ನು ಬಳಿಸಿಕೊಂಡಿದ್ದರು. ಗುಜರಾತ್ ಪೊಲೀಸ್ ಅಧಿಕಾರಿಗಳು ಮತ್ತು ಅಮಿತ್ ಶಾ ಅವರು ಈ ಬಗ್ಗೆ ಮಾತನಾಡಿದ್ದ ಸಂಭಾಷಣೆಯ ವಿವರ ವೆಬ್‌ಸೈಟ್‌ಗಳಿಗೆ ದೊರೆತು ಬಹಿರಂಗಗೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


