ಬೋಧಗಯಾ ಸ್ಫೋಟಕ್ಕೆ ಸಿಲಿಂಡರ್, ಬಾಲ್ಸ್ ಬಳಕೆ: ಶಿಂಧೆ

ಪಾಟ್ನಾ: ಬೋಧಗಯಾ ಸರಣಿ ಸ್ಫೋಟಕ್ಕೆ ಉಗ್ರರು ಸಿಲಿಂಡರ್ ಸಹಿತ ಮೊಳೆ, ಹಾಗೂ ಸೈಕಲ್ ಬಾಲ್ಗಳನ್ನು ಬಳಸಿಕೊಂಡಿರುವುದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ತನಿಖೆಯಿಂದ ತಿಳಿದುಬಂದಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಬುಧವಾರ ಹೇಳಿದ್ದಾರೆ.
ಇಂದು ಶಿಂಧೆ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಸರಣಿ ಸ್ಫೋಟ ಸಂಭವಿಸಿದ ಬೋಧಗಯಾದಲ್ಲಿನ ಮಹಾಬೋಧಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಸ್ಫೋಟಕ್ಕೆ ಉಗ್ರರು ಸಿಲಿಂಡರ್ ಸಹಿತ ಮೊಳೆಗಳನ್ನು ಹಾಗೂ ಸೈಕಲ್ ಬಾಲ್ಗಳನ್ನು ಬಳಸಿದ್ದಾರೆ ಎಂದು ಬಿಹಾರ ಸರ್ಕಾರ ತಿಳಿಸಿತ್ತು ಮತ್ತು ಈ ಅಂಶಗಳೇ ಎನ್ಐಎ ತನಿಖೆಯಲ್ಲೂ ಕಂಡುಬಂದಿರುವುದಾಗಿ ತಿಳಿಸಿದರು.
ಉಗ್ರರು 13 ಸ್ಫೋಟಕಗಳನ್ನು ಬಳಸಿದ್ದು, ಅದರಲ್ಲಿ 10 ಸ್ಫೋಟಕಗಳು ಮಾತ್ರ ಸ್ಫೋಟಗೊಂಡಿದೆ. ಇನ್ನುಳಿದ ಸ್ಫೋಟಕಗಳನ್ನು ಬಾಂಬ್ ನಿಷ್ಕ್ರಿಯ ತಂಡ ನಿಷ್ಕ್ರಿಯೆಗೊಳಿಸಿದೆ. ಈ ಸ್ಫೋಟದಲ್ಲಿ 5 ರಿಂದ 6 ಶಂಕಿತ ಉಗ್ರರ ಕೈವಾಡ ಇದ್ದು, ದಾಳಿಯ ವೇಳೆ ಅವರು ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಸ್ಪಷ್ಟವಾಗಿದೆ. ಅಲ್ಲದೆ ಕಾರನ್ನು ಸಹ ಸ್ಫೋಟಕ್ಕೆ ಬಳಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಶಿಂಧೆ ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಈ ಸಂಬಂಧ ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಸ್ಫೋಟಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೀಡಲಾಗುವುದು ಎಂದರು.
ದೇಶದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಉಗ್ರರು 1500 ವರ್ಷಗಳ ಪುರಾತನ ದೇವಸ್ಥಾನವನ್ನು ಗುರಿಯಾಗಿರಿಸಿಕೊಂಡು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


