ಬಿಸಿಯೂಟ ದುರಂತ: ಮೌನ ಮುರಿದ ನಿತೀಶ್

ಪಾಟ್ನಾ: ಬಿಹಾರದ ಸರಣ್ ಜಿಲ್ಲೆಯ ಛಪ್ರಾದಲ್ಲಿ ಸಂಭವಿಸಿದ ಬಿಸಿಯೂಟ ದುರಂತ ಸ್ಥಳಕ್ಕೆ ಬಿಹಾರ ಮುಖ್ಯಮಂತ್ರಿ ಭೇಟಿ ನೀಡದೇ ಇರುವ ಬಗ್ಗೆ ವಿಮರ್ಶಕರ ಟೀಕೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಇದೀಗ ಮೌನ ಮುರಿದಿದ್ದಾರೆ.
ದುರಂತದ ನಂತರ "ನಾನು ಅಲ್ಲಿಗೆ ಯಾಕೆ ಹೋಗಿಲ್ಲ? ನಾನ್ಯಾಕೆ ಮೌನವಾಗಿದ್ದೇನೆ?" ಹೀಗೆ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ನನ್ನ ಕಾಲಿಗೆ ಗಾಯವಾಗಿರುವುದರಿಂದಲೇ ನನಗೆ ದುರಂತ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ಇತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿತೀಶ್ ಹೇಳಿದ್ದಾರೆ.
ದುರಂತ ಸಂಭವಿಸಿದ ಅದೇ ದಿನ (ಜುಲೈ 16) ಸಂಜೆ ನನಗೆ ಮಾಹಿತಿ ಲಭಿಸಿತ್ತು. ಆವಾಗಲೇ ನಾವು ತುರ್ತು ಕಾರ್ಯಚರಣೆ ಮಾಡಿದ್ದು, ನನ್ನ ಕೈಲಾದ ಮಟ್ಟಿಗೆ ಕ್ರಮಗಳನ್ನು ತೆಗೆದುಕೊಂಡಿದ್ದೇನೆ.
ಈ ದುರಂತದ ಬಗ್ಗೆ ನನಗೆ ಅತೀವ ಖೇದವಿದೆ ಮತ್ತು ಪರಿಸ್ಥಿತಿಯ ಬಗ್ಗೆ ನಾನು ನಿಗಾವಹಿಸುತ್ತಿದ್ದೇನೆ ಎಂದು ನಿತೀಶ್ ಹೇಳಿದ್ದಾರೆ.
ಅದೊಂದು ಸಾಮಾನ್ಯ ದುರಂತ ಅಲ್ಲ. ನನ್ನ ಸಾರ್ವಜನಿಕ ಜೀವನದಲ್ಲಿ ಇದೊಂದು ದುಃಖದ ಹಾಗು ಹೃದಯವಿದ್ರಾವಕ ಘಟನೆ.
ಯಾರಿಗಾದರೂ ಮಕ್ಕಳ ಬಗ್ಗೆ ವೈರತ್ವ ಇರೋಕೆ ಸಾಧ್ಯವೆ? ಎಂದು ನಿತೀಶ್ ಪ್ರಶ್ನಿಸಿದ್ದಾರೆ.
ಅದೇ ವೇಳೆ ಈ ದುರಂತಕ್ಕೆ ಕಾರಣವಾಗಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ ಜೆಡಿ(ಯು) ನಾಯಕ, ಈ ಬಗ್ಗೆ ಎಲ್ಲ ಸ್ತರದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಮಕ್ಕಳು ಅನ್ನದ ಗುಣಮಟ್ಟದ ಬಗ್ಗೆ ಆಗ್ಗಾಗ್ಗೆ ದೂರು ನೀಡಿದ್ದರೂ, ಈ ಬಗ್ಗೆ ಯಾಕೆ ಗಮನ ಹರಿಸಿಲ್ಲ? ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ನಿತೀಶ್ ಹೇಳಿದ್ದಾರೆ. ಬಿಸಿಯೂಟದಲ್ಲಿ ಪತ್ತೆಯಾಗಿರುವ ಕೀಟನಾಶಕದ ಪ್ರಮಾಣ ನೋಡಿದರೆ ಗೊತ್ತಾಗುತ್ತೆ ಇದರ ಹಿಂದೆ ಏನೂ ಪಿತೂರಿ ಇದೆ ಎಂಬುದು ತಿಳಿಯುತ್ತೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ತನಿಖೆ ಮುಂದುವರಿದಿದ್ದು, ಇನ್ಮುಂದೆ ಬಿಸಿಯೂಟ ಯೋಜನೆಯನ್ನು ಇನ್ನಷ್ಟು ಉತ್ತಮವಾಗಿ ಮಾಡಲಾಗುವುದು.
ದುರಂತದ ಬಗ್ಗೆ ನಾವು ಕೇಂದ್ರ ಸರ್ಕಾರದ ಜತೆ ಮಾತನಾಡಲಿದ್ದೇವೆ. ಇದಕ್ಕೆ ನಾವು ಕೇಂದ್ರ ಹೊಣೆ ಎಂದು ದೂರುವುದಿಲ್ಲ. ಇದು ದೇಶೀಯ ಯೋಜನೆಯಾಗಿದ್ದರೂ, ನಾವದನ್ನು ಚಾಲೆಂಜ್‌ನಂತೆ ತೆಗೆದುಕೊಂಡು ಮುನ್ನಡೆಸಬೇಕಾಗಿದೆ.
ಆದಾಗ್ಯೂ ಬಿಜೆಪಿ ವಿರುದ್ಧ ಪರೋಕ್ಷ ಟೀಕೆ ಮಾಡಿದ ನಿತೀಶ್, ದುರಂತ ಪೀಡಿತರಿಗೆ ಸಹಾಯ ಮಾಡಬೇಕೆಂದಿದ್ದರೆ, ಅವರು ಬಂದ್‌ಗೆ ಆಹ್ವಾನ ನೀಡಿದ್ದಾದರೂ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಇಂಥಾ ಘಟನೆಗಳು ನಡೆದಾಗ ನಾನು ಮನೆಯಲ್ಲಿ ಸುಮ್ಮನೆ ಕೂರುವ ಜಾಯಮಾನದವನಲ್ಲ. ನಾನು ದುರಂತ ಸ್ಥಳಕ್ಕೆ ಭೇಟಿ ನೀಡದೇ ಇರುವುದಕ್ಕೆ ಕಾರಣವೂ ಇದೆ. ನಾನು ಇಂಥಾ ವಿಷಯಗಳಲ್ಲಿ ರಾಜಕಾರಣ ಮಾಡುವವನಲ್ಲ. ನನಗೆ ನನ್ನದೇ ಆದ ಜವಾಬ್ದಾರಿಗಳಿವೆ, ಅದರ ಬಗ್ಗೆ ನನಗೆ ಗೊತ್ತಿದೆ ಎಂದು ನಿತೀಶ್ ನುಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


